ಅದು ನಗರದ ಹೃದಯ ಭಾಗದಲ್ಲಿರೋ ದೇವಸ್ಥಾನ. ಸಾಕಷ್ಟು ಇತಿಹಾಸ ಹೊಂದಿರೋ ಆ ದೇವಸ್ಥಾನಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಬಂದು ಹೋಗುತ್ತಾರೆ. ತಮ್ಮ ಕಷ್ಟ ನಿವಾರಣೆಗಾಗಿ ಪ್ರಾರ್ಥಿಸುತ್ತಾರೆ. ಆದರೆ ದೇವಸ್ಥಾನದ ಅಭಿವೃದ್ಧಿ ನನೆಗುದಿಗೆ ಬಿದ್ದಿರುವುದನ್ನು ಖಂಡಿಸಿ ಭಕ್ತರು ಭಜನೆ ಮೂಲಕ ಪ್ರತಿಭಟನೆ ನಡೆಸುವ ಮೂಲಕ ಗಮನ ಸೆಳೆದರು. ಹಾಗಾದ್ರೆ ಆ ದೇವಸ್ಥಾನ ಯಾವ್ದು, ಭಕ್ತರ ಬೇಡಿಕೆ ಏನು. ಈ ಸ್ಟೋರಿ ನೋಡಿ.
ಹೀಗೆ ದೇವಿಯ ಭಜನೆ ಮಾಡುತ್ತಾ ಕುಳಿತ ಇವರು ಯಾವುದೇ ಸ್ಪರ್ಧೆಯಲ್ಲಿ ಭಾಗವಹಿಸಿದವರಲ್ಲ. ಬದಲಿಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಆವರಣದಲ್ಲಿರುವ ಶ್ರೀ ಚೌಡೇಶ್ವರಿ ದೇವಸ್ಥಾನದ ಅಭಿವೃದ್ಧಿ ನನೆಗುದಿಗೆ ಬಿದ್ದಿರುವುದನ್ನು ಖಂಡಿಸಿ ಭಜನೆ ಮಾಡುತ್ತಿರುವವರು. ಹೌದು. ಇತಿಹಾಸ ಪ್ರಸಿದ್ಧ ಚೌಡೇಶ್ವರಿ ದೇವಸ್ಥಾನವನ್ನು 2019ರಲ್ಲಿ ಪುನರ್ ನಿರ್ಮಾಣದ ಹೆಸರಿನಲ್ಲಿ ಕೆಡವಿ ಪ್ರಸಾದ ನಿಲಯಕ್ಕೆ ಸ್ಥಳಾಂತರಿಸಿ ವರ್ಷಗಳೇ ಕಳೆದಿವೆ.

ಆದರೆ ಈ ತನಕ ಪುನರ್ ನಿರ್ಮಾಣ ಕೆಲಸ ಆಗಿಲ್ಲ. ಈ ಬಗ್ಗೆ ಸ್ಥಳೀಯ ಶಾಸಕರಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಕೆಲಸವಾಗಿಲ್ಲ. ನಾಮಕಾವಸ್ಥೆಗೆ 2019ರಲ್ಲಿ ಆರಂಭವಾದ ಕಾಮಗಾರಿ ನಂತರ ನಿಂತು ಹೋಗಿದೆ. ಹಿಂದೂ ಹುಲಿ ಎಂದು ಕರೆಸಿಕೊಳ್ಳುವ ಶಾಸಕ ಕೆ.ಎಸ್.ಈಶ್ವರಪ್ಪ ದೇವಸ್ಥಾನದ ನಿರ್ಮಾಣಕ್ಕೆ ಸರ್ಕಾರದಿಂದ ಹಣ ತಂದು ಕೆಲಸ ಪೂರ್ಣ ಮಾಡುವಲ್ಲಿ ವಿಫಲರಾಗಿದ್ದಾರೆ. ಗುತ್ತಿಗೆದಾರರನ್ನು ಕೇಳಿದರೆ ಹಣ ಬಂದಿಲ್ಲ ಎನ್ನುತ್ತಾರೆ. ಹಾಗಾಗಿ ದೇವಸ್ಥಾನ ನಿರ್ಮಾಣಕ್ಕೆ ದೇವಿಯೇ ಶಾಸಕರಿಗೆ ಸದ್ಭುದ್ಧಿ ನೀಡಲಿ ಎಂದು ಭಜನೆ ಮಾಡಿದ್ದಾಗಿ ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಆಸ್ಪತ್ರೆಯ ಆವರಣದಲ್ಲಿರುವ ದೇವಸ್ಥಾನ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಭಗವಾನ್ ಶ್ರೀಧರ ಸ್ವಾಮಿಗಳಿಂದ ಸ್ಥಾಪಿಸಲ್ಪಟ್ಟ ಈ ದೇವಸ್ಥಾನಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಆಸ್ಪತ್ರೆಗೆ ಬರುವ ರೋಗಿಗಳು ಹಾಗೂ ಅವರ ಸಂಬಂಧಿಕರು ತಮ್ಮ ಆರೋಗ್ಯಕ್ಕಾಗಿ ದೇವಿಯನ್ನು ಪೂಜಿಸುತ್ತಾ ಬಂದಿದ್ದು ಅನೇಕ ಪವಾಡಗಳಿಗೆ ದೇವಸ್ಥಾನ ಸಾಕ್ಷಿಯಾಗಿದೆ.
ಜಾತಿ, ಧರ್ಮ ಭೇದಭಾವವಿಲ್ಲದೆ ಭಕ್ತರು ಇಲ್ಲಿಗೆ ಬರುತ್ತಾರೆ. ಆಸ್ಪತ್ರೆಯಲ್ಲಿ ಕೆಲಸ ಮಾಡುವವರಿಗೂ ದೇವಿಯ ಶಕ್ತಿ ಅನುಭವಕ್ಕೆ ಬಂದಿದೆ. ಆದರೆ ಕಳೆದ ನಾಲ್ಕೈದು ವರ್ಷದ ಹಿಂದೆ ಕೆಡವಲ್ಪಟ್ಟ ದೇವಸ್ಥಾನ ಹಾಗೂ ಸ್ಥಳಾಂತರಿಸಲ್ಪಟ್ಟ ದೇವಿಯ ವಿಗ್ರಹ ಮರು ಸ್ಥಾಪನೆ ಆಗಿದಿರುವ ನೋವು ಕಾಡುತ್ತಿದೆ. ಹಾಗಾಗಿ ದೇವಸ್ಥಾನ ನಿರ್ಮಾಣ ಕಾರ್ಯ ಶೀಘ್ರವೇ ಪೂರ್ಣಗೊಳಿಸಿ ಭಕ್ತರಿಗೆ ಹಿಂದಿನಂತೆ ಸೇವೆ ಸಲ್ಲಿಸಲು ಅವಕಾಶ ನೀಡಬೇಕು ಎಂಬುದು ಭಕ್ತರ ಆಗ್ರಹವಾಗಿದೆ. ಒಟ್ಟಿನಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ನಡೆದುಕೊಳ್ಳುವ ದೇವಸ್ಥಾನವನ್ನು ಅಭಿವೃದ್ಧಿ ಹೆಸರಿನಲ್ಲಿ ಕೆಡವಿ ವರ್ಷಗಳಾಗುತ್ತ ಬಂದಿರುವ ಸಂದರ್ಭದಲ್ಲಿ ದೇವಿಯ ಮರು ಪ್ರತಿಷ್ಠೆಗೆ ಆಗ್ರಹಿಸಿ ಭಜನೆ ಮಾಡುವ ಮೂಲಕ ಭಕ್ತರು ಗಮನ ಸೆಳೆದಿದ್ದು ಸರ್ಕಾರ ಹೇಗೆ ಸ್ಪಂದಿಸುತ್ತದೆ ಎಂಬುದನ್ನು ಕಾದು ನೋಡಬೇಕು.
