ಚಾಮರಾಜನಗರ: ಅಂತೂ ಇಂತೂ ಕಾಡಂಚಿನ ಮಕ್ಕಳಿಗೆ ಸಾರಿಗೆ ವ್ಯವಸ್ಥೆಯಾಗಿದೆ. ಹೌದು ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರಬೆಟ್ಟದ ಕಾಡಂಚಿನ ಜನರಿಗೆ ಮಲೆಮಹದೇಶ್ವರಬೆಟ್ಟ ಅಭಿವೃದ್ದಿ ಪ್ರಾಧಿಕಾರದಿಂದ ಜನವನ ವಾಹನ ಸೇವೆ ಮತ್ತೆ ಆರಂಭವಾಗಿದೆ. ಜನವನ ಈ ಹಿಂದೆ ಪ್ರಾರಂಭವಾಗಿತ್ತು. ಆದರೆ ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸ್ಥಗಿತಗೊಂಡಿತ್ತು. ಆದ್ದರಿಂದ ಹಲವು ದಿನಗಳಿಂದ ವಾಹನದ ವ್ಯವಸ್ಥೆ ಇಲ್ಲದೆ ಕಾಡಂಚಿನ ಮಕ್ಕಳು ಶಾಲೆಗೆ ತೆರಳಲು ಪರದಾಡ್ತಾ ಇದ್ರು.
ಮಕ್ಕಳು ಸೇರಿದಂತೆ ವೃದ್ದರಿಗೆ ಸಂಚರಿಸಲು ವಾಹನದ ವ್ಯವಸ್ಥೆ ಇಲ್ಲದೆ ಪರದಾಡುತ್ತಿದ್ರು. ಅದರಲ್ಲೂ ಅನಾರೋಗ್ಯಕ್ಕೆ ಒಳಗಾದ್ರೆ ಜನರ ಪಾಡು ಹೇಳತೀರದಾಗಿತ್ತು. ಹಾಗಾಗಿ ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿರವರ ವಿಶೇಷ ಕಾಳಜಿಯಿಂದ ಜನವನ ಸಾರಿಗೆ ಮತ್ತೆ ಪ್ರಾರಂಭವಾಗಿದೆ. ಖುದ್ದು ಸರಸ್ವತಿರವರು ಶಾಲಾ ಮಕ್ಕಳಿಗೆ ಸಿಹಿ ಹಂಚಿ ಇಂಡಿಗನತ್ತ ಕಡೆಗೆ ಶಾಲಾ ಮಕ್ಕಳನ್ನು ಕರೆದೊಯ್ದು ಸುರಕ್ಷತೆಯಿಂದ ಪ್ರಯಾಣಿಸಲು ಮಕ್ಕಳಿಗೆ ತಿಳಿಹೇಳಿ ಶುಭ ಕೋರಿದರು.