ವಾಷಿಂಗ್ಟನ್: ಅಮೆರಿಕಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಶ್ವೇತಭವನಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಟೆಸ್ಲಾ ಮತ್ತು ಸ್ಪೇಸ್ಎಕ್ಸ್ ಸಿಇಒ ಎಲೋನ್ ಮಸ್ಕ್ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.
ಟೆಸ್ಲಾ, ಸ್ಟಾರ್ಲಿಂಗ್ ಮತ್ತು ಸ್ಪೇಸ್ಎಕ್ಸ್ನ ಮುಖ್ಯಸ್ಥರಾದ ಎಲಾನ್ ಮಸ್ಕ್ ಡೊನಾಲ್ಡ್ ಟ್ರಂಪ್ ಆಡಳಿತದಲ್ಲಿ ಸರ್ಕಾರದ ದಕ್ಷತೆಯ ಇಲಾಖೆಯ ಮುಖ್ಯಸ್ಥರಾಗಿಯೂ ಕಾರ್ಯ ನಿರ್ವಹಿಸಿದ್ದರು. ಈ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ಮತ್ತು ಎಲೋನ್ ಮಸ್ಕ್ ಭೇಟಿ ಕೂಡ ಮಹತ್ವ ಪಡೆದುಕೊಂಡಿದೆ.
ಈ ಹಿಂದೆ ಭಾರತವು ಟೆಸ್ಲಾ ಕಾರುಗಳನ್ನು ಸ್ವಾಗತಿಸಲು ಸಿದ್ಧವಾಗಿತ್ತು, ಜೊತೆಗೆ ಉತ್ಪಾದನೆಯನ್ನು ಉತ್ತೇಜಿಸಲು ಹಲವು ನೀತಿಗಳನ್ನು ಜಾರಿಗೆ ತಂದಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಎಲೋನ್ ಮಸ್ಕ್ ಭಾರತ ಭೇಟಿಯನ್ನು ರದ್ದುಗೊಳಿಸಿ ಚೀನಾಕ್ಕೆ ತೆರಳಿದ್ದರು. ಈಗ ಎಲಾನ್ ಮಸ್ಕ್ ಭಾರತದಲ್ಲಿ ಉತ್ಪಾದನೆಗೆ ಬದ್ಧರಾಗುವ ಸಾಧ್ಯತೆ ಕಡಿಮೆ ಎಂದು ಮೂಲಗಳು ತಿಳಿಸಿವೆ. ಆದರೂ ಟ್ರಂಪ್ ಹಾಗೂ ಮೋದಿ ಭೇಟಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಎಲೋನ್ ಮಸ್ಕ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದಾಗ ಎಲೆಕ್ಟ್ರಿಕ್ ವಾಹನಗಳು, ಸ್ಟಾರ್ಲಿಂಗ್ ಪರವಾನಗಿಗಳು ಮತ್ತು ಸ್ಪೇಸ್ಎಕ್ಸ್-ಇಸ್ರೋ ಸಹಯೋಗದ ಬಗ್ಗೆ ಚರ್ಚಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.