ದಾವಣಗೆರೆ: ಹೊನ್ನಾಳಿ ಪುರಸಭೆಯ ಕಾಂಗ್ರೆಸ್ ಸದಸ್ಯರ ನಡುವೆ ಟೆಂಡರ್ ವಿಚಾರಕ್ಕೆ ಆರಂಭವಾದ ಮಾತಿನ ಚಕಮಕಿ ಮಾರಾಮಾರಿಗೆ ಕಾರಣವಾಗಿದೆ.
ಇಂದು ಹೊನ್ನಾಳಿಯ ಪುರಸಭೆ ಸದಸ್ಯರ ಸಭೆ ನಡೆದಿತ್ತು. ಈ ವೇಳೆ ಹೊನ್ನಾಳಿಯ ಕುರಿ ಸಂತೆ, ಮಾರ್ಕೆಟ್ ಟೆಂಡರ್ ಸೇರಿದಂತೆ ಹಲವು ಟೆಂಡರ್ ವಿಚಾರ ಪ್ರಸ್ತಾಪವಾಗಿದ್ದು, ಟೆಂಡರ್ ವಿಚಾರ ಪ್ರಸ್ತಾಪವಾಗುತ್ತಿದ್ದಂತೆ ಸದಸ್ಯರ ನಡುವೆ ವಾಗ್ವಾದ ಶುರುವಾಗಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿ, ಸ್ಥಾಯಿ ಸಮಿತಿ ಸದಸ್ಯ ಹೊಸಕೆರೆ ಸುರೇಶ್ ಮೇಲೆ ಪುರಸಭೆ ಸದಸ್ಯ ಘಾಡ್ಜೀಲಾ ಸುರೇಶ್ ಕಪಾಳಮೋಕ್ಷ ಮಾಡಿದ್ದಾರೆ.
ಈ ಹಿಂದೆ ಸ್ಥಾಯಿ ಸಮಿತಿ ಸದಸ್ಯರ ಆಯ್ಕೆ ವಿಚಾರದಲ್ಲೂ ಸಹ ಇಬ್ಬರ ನಡುವೆ ಮನಸ್ತಾಪವಾಗಿತ್ತು. ಈಗ ಟೆಂಡರ್ ವಿಚಾರದಲ್ಲಿಯೂ ಗಲಾಟೆ ನಡೆದಿದೆ. ಉಳಿದ ಸದಸ್ಯರು ಇಬ್ಬರನ್ನು ತಡೆದು ಸಮಾಧಾನಪಡಿಸಿದ್ದಾರೆ. ಜನರಿಗೆ ಒಳಿತಾಗುವ ಕೆಲಸ ಮಾಡುವ ಬದಲು ಹೊಡೆದಾಡಿಕೊಂಡಿದ್ದಾರೆ ಎಂದು ಪುರಸಭೆ ಸದಸ್ಯರ ವಿರುದ್ಧ ಜನ ಅಸಮಾಧಾನ ಹೊರಹಾಕಿದ್ದಾರೆ.