ಭಾರತ ಏಕದಿನ ಹಾಗೂ ಟಿ20 ತಂಡದ ನಾಯಕ ರೋಹಿತ್ ಶರ್ಮಾ ಇಲ್ಲಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ(ಎನ್‌ಸಿಎ) ಯಲ್ಲಿ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡಿದ್ದು, ನಡೆಸಲಾದ ಮೊದಲ ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸ್ನಾಯು ಸೆಳೆತದಿಂದಾಗಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ಅಲಭ್ಯರಾಗಿದ್ದ ರೋಹಿತ್, ಎನ್‌ಸಿಎ(NCA)ನಲ್ಲಿ ಪುನಶ್ಚೇತನ ಶಿಬಿರಕ್ಕೆ ಹಾಜರಾಗಿದ್ದರು. ಭಾನುವಾರ 2ನೇ ಹಂತದ ಫಿಟ್ನೆಸ್ ಪರೀಕ್ಷೆಗೆ ರೋಹಿತ್ ಒಳಗಾಗಲಿದ್ದು, ಅದರಲ್ಲೂ ಉತ್ತೀರ್ಣರಾದರೆ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಅವರು ಲಭ್ಯರಾಗಲಿದ್ದಾರೆ ಎಂದು ತಿಳಿದುಬಂದಿದೆ.
ಇದೇ ವೇಳೆ ಎನ್‌ಸಿಎ ಶಿಬಿರದಲ್ಲಿ ಪಾಲ್ಗೊಂಡಿರುವ ರವೀಂದ್ರ ಜಡೇಜಾ ಹಾಗೂ ಅಕ್ಷರ್ ಪಟೇಲ್ ಇನ್ನೂ ಸಂಪೂರ್ಣವಾಗಿ ಗುಣಮುಖರಾಗದ ಕಾರಣ ಏಕದಿನ ಸರಣಿಗೆ ಅವರನ್ನು ಆಯ್ಕೆ ಮಾಡುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ರವೀಂದ್ರ ಜಡೇಜಾ ಹಾಗೂ ಅಕ್ಷರ್ ಪಟೇಲ್ ತವರಿನಲ್ಲಿ ನ್ಯೂಜಿಲೆಂಡ್ ವಿರುದ್ದದ ಸರಣಿಯಲ್ಲಿ ಪಾಲ್ಗೊಂಡಿದ್ದರು. ಆದರೆ ಗಾಯದ ಸಮಸ್ಯೆಯಿಂದಾಗಿ ದಕ್ಷಿಣ ಆಫ್ರಿಕಾ ಪ್ರವಾಸದಿಂದ ಹೊರಬಿದ್ದಿದ್ದರು. ಟೀಂ ಇಂಡಿಯಾ , ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಮೂರು ಪಂದ್ಯಗಳ ಟೆಸ್ಟ್ ಸರಣಿ ಹಾಗೂ ಮೂರು ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ.

