2003ರ ಟೂರ್ನಿಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಎರಡು ಬಾರಿ ಮುಖಾಮುಖಿಯಾಗಿತ್ತು. ಲೀಗ್ ಪಂದ್ಯದಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧ ಮಾತ್ರ ಸೋತು ಫೈನಲಿಗೆ ಏರಿದ್ದರೆ ಆಸ್ಟ್ರೇಲಿಯಾ ಅಜೇಯ ತಂಡವಾಗಿ ಫೈನಲ್ ತಲುಪಿತ್ತು.
ಎರಡು ತಂಡಗಳು ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಬಲಾಢ್ಯವಾಗಿದ್ದವು. ಸಚಿನ್ ತೆಂಡೂಲ್ಕರ್ (Sachin Tendulkar) ಟೂರ್ನಿಯಲ್ಲೇ 600+ ರನ್ ಸಿಡಿಸಿ ಬೌಲರ್ಗಳಿಗೆ ಭಯ ಹುಟ್ಟಿಸಿದ್ದರು.

ಟೀಂ ಇಂಡಿಯಾ ಪರವಾಗಿ ವೀರೇಂದ್ರ ಸೆಹ್ವಾಗ್, ಸೌರವ್ ಗಂಗೂಲಿ, ಮೊಹಮ್ಮದ್ ಕೈಫ್, ರಾಹುಲ್ ದ್ರಾವಿಡ್, ಯುವರಾಜ್ ಸಿಂಗ್, ದಿನೇಶ್ ಮೊಗಿಯಾ ಬ್ಯಾಟಿಂಗ್ ಬಲ ತುಂಬಿದ್ದರೆ ಹರ್ಬಜನ್ ಸಿಂಗ್, ಜಹೀರ್ ಖಾನ್, ಜಾವಗಲ್ ಶ್ರೀನಾಥ್, ಅಶೀಶ್ ನೆಹ್ರಾ ಬೌಲಿಂಗ್ ಶಕ್ತಿಯಾಗಿದ್ದರು.
ಆಸ್ಟ್ರೇಲಿಯಾದಲ್ಲಿ ಗಿಲ್ಕ್ರಿಸ್ಟ್, ಹೇಡನ್, ಪಾಟಿಂಗ್, ಡೇಮಿಯನ್ ಮಾರ್ಟಿನ್, ಡ್ಯಾರೆನ್ ಲೆಹ್ಮನ್, ಮೈಕಲ್ ಬೆವನ್, ಸೈಮಂಡ್ಸ್ ಬ್ಯಾಟಿಂಗ್ ಶಕ್ತಿಯಾಗಿದ್ದರು. ಮೆಗ್ರಾಥ್, ಬ್ರೇಟ್ ಲೀ, ಆಂಡಿ ಬಿಕೆಲ್, ಬ್ರಾಡ್ ಹಾಗ್ ಬೌಲರ್ಗಳಾಗಿದ್ದರು.
ಎರಡು ಸಮಬಲದ ತಂಡವಾಗಿದ್ದರಿಂದ ನಿರೀಕ್ಷೆಯೂ ಹೆಚ್ಚಿತ್ತು. ಟಾಸ್ ಗೆದ್ದ ಸೌರವ್ ಗಂಗೂಲಿ (Sourav Ganguly) ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದರು. ಕ್ರೀಸ್ಗೆ ಆಗಮಿಸಿದ ಕೀಪರ್ ಗಿಲ್ಕ್ರಿಸ್ಟ್ ಮತ್ತು ಮಾಥ್ಯೂ ಹೇಡನ್ ಬೌಲರ್ಗಳನ್ನು ದಂಡಿಸಲು ಆರಂಭಿಸಿದರು. ಪರಿಣಾಮ ಮೊದಲ ವಿಕೆಟಿಗೆ 84 ಎಸೆತಗಳಲ್ಲಿ 105 ರನ್ ಜೊತೆಯಾಟ ಬಂದಿತ್ತು.

