ಹೊಸದಿಲ್ಲಿ: ಮನೆಯಿಂದ ಕೆಲಸ ಮಾಡುವ ಪದ್ಧತಿಗೆ (ವರ್ಕ್ ಫ್ರಂ ಹೋಂ) ತಿಲಾಂಜಲಿ ನೀಡಿ, ಕಚೇರಿಯಲ್ಲಿಯೇ ವಾರದ 5 ದಿನ ಕೆಲಸ ಮಾಡುವ ಪದ್ಧತಿಯನ್ನು ಜಾರಿಗೊಳಿಸಿದ್ದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್), ಈಗ ‘ದಿಢೀರ್ ವರ್ಗಾವಣೆ’ ನೀತಿಯನ್ನು ಜಾರಿಗೊಳಿಸಿದೆ.
ಟಾಟಾ ಗ್ರೂಪ್ ಕಂಪನಿಯ ಈ ನಿರ್ಧಾರಕ್ಕೆ ಟಿಸಿಎಸ್ ವಿರುದ್ಧ ಅಸಮಾಧಾನಗೊಂಡಿರುವ ಐಟಿ ಉದ್ಯೋಗಿಗಳ ಸಂಘಟನೆಯು (ಎನ್ಐಟಿಇಎಸ್), ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯಕ್ಕೆ ದೂರು ನೀಡಿದೆ. “2,000ಕ್ಕೂ ಹೆಚ್ಚು ಉದ್ಯೋಗಿಗಳಿಗೆ ಸರಿಯಾದ ಸೂಚನೆ ಅಥವಾ ಸಮಾಲೋಚನೆ ಇಲ್ಲದೆಯೇ ಬೇರೆ ಬೇರೆ ನಗರಗಳಿಗೆ ದಿಢೀರ್ ವರ್ಗಾವಣೆ ಮಾಡಲಾಗಿದೆ. 15 ದಿನಗಳಲ್ಲಿ ನಿಗದಿತ ಸ್ಥಳಕ್ಕೆ ತೆರಳುವಂತೆ ಸೂಚಿಸಿದೆ. ನಮಗೆ ಉದ್ಯೋಗಿಗಳಿಂದ 180ಕ್ಕೂ ಹೆಚ್ಚು ದೂರುಗಳು ಬಂದಿವೆ. ಕಂಪನಿಯ ಕ್ರಮದಿಂದ ಉದ್ಯೋಗಿಗಳಿಗೆ ಮತ್ತು ಅವರ ಕುಟುಂಬಗಳಿಗೆ ಅಪಾರ ತೊಂದರೆಯಾಗಿದೆ,” ಎಂದು ಎನ್ಐಟಿಇಎಸ್ ಆರೋಪಿಸಿದೆ.
“ಒತ್ತಾಯಪೂರ್ವಕವಾಗಿ ವರ್ಗಾವಣೆ ಮಾಡಲಾಗಿದೆ. ಅನೈತಿಕ ವರ್ಗಾವಣೆ ಅಭ್ಯಾಸಗಳನ್ನು ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಆರಂಭಿಸಿದೆ. ವರ್ಗಾವಣೆ ನಿರ್ದೇಶನಗಳನ್ನು ಅನುಸರಿಸಲು ವಿಫಲವಾದರೆ ಉದ್ಯೋಗಿಗಳು ಶಿಸ್ತು ಕ್ರಮಗಳನ್ನು ಎದುರಿಸಬೇಕಾಗುತ್ತದೆ ಎಂದು ಕಂಪನಿಯು ಉದ್ಯೋಗಿಗಳಿಗೆ ಎಚ್ಚರಿಕೆ ನೀಡಿದೆ,” ಎಂದು ಪುಣೆ ಮೂಲದ ಎನ್ಐಟಿಇಎಸ್ ಹೇಳಿದೆ.