ವಿಜಯಪುರ: ತನ್ವೀರ್ ಪೀರಾ ಅವರು ಯಾವ ಉಗ್ರ ಸಂಘಟನೆಯೊಂದಿಗೂ ಸಂಬಂಧ ಹೊಂದಿಲ್ಲ. ಬೇಕಿದ್ದರೆ ಎನ್ಐಎ ತನಿಖೆಗೆ ಕೊಡಲಿ ಎಂದು ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಸಚಿವ ಎಂ.ಬಿ ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಯತ್ನಾಳ್ ಗಾಳಿಯಲ್ಲಿ ಗುಂಡು ಹಾರಿಸುವ ಕೆಲಸ ಮಾಡುತ್ತಿದ್ದಾರೆ.
ಅವರೊಬ್ಬ ಸುಳ್ಳುಗಾರ ಎಂದರು. ತನ್ವೀರ್ ಪೀರಾ ಅವರು ಯಾವ ಉಗ್ರ ಸಂಘಟನೆಯೊಂದಿಗೂ ಸಂಬಂಧ ಹೊಂದಿಲ್ಲ. ಬೇಕಿದ್ದರೆ ಎನ್ಐಎ ತನಿಖೆಗೆ ಕೊಡಲಿ. ಆರೋಪ ಸುಳ್ಳು ಎಂದು ಸಾಬೀತಾದರೆ ಏನು ಮಾಡ್ತಾರೆ? ಎಂಬುದನ್ನು ಅವರು ಹೇಳಲಿ. ನಾವು ಅವರಿಗೆ ದೇಶ ಬಿಟ್ಟು ಹೋಗಿ ಎಂದು ಹೇಳುವುದಿಲ್ಲ. ಈ ಬಗ್ಗೆ ಅವರು ಸ್ಪಷ್ಟನೆ ಕೊಡಲಿ ಎಂದು ಸವಾಲ್ ಹಾಕಿದ್ದಾರೆ.
ಮುಖ್ಯಮಂತ್ರಿ ಅವರನ್ನು ನಾನೇ ತನ್ವೀರ್ ಪೀರಾ ಅವರ ಮನೆಗೆ ಕರೆದುಕೊಂಡು ಹೋಗಿದ್ದೆ. ಅವರೊಂದಿಗೆ ನಮ್ಮ ಒಡನಾಟ ಮೊದಲಿನಿಂದಲೂ ಇದೆ. ಯತ್ನಾಳ್ ಹಾಗೂ ತನ್ವೀರ್ ಪೀರಾ ಕುಟುಂಬಸ್ಥರ ಉದ್ಯಮಗಳು ಇದ್ದವು. ಹೋಟೆಲ್ ಹಾಗೂ ಇನ್ನಿತರೆ ಉದ್ಯಮದಲ್ಲಿ ಇವರೊಟ್ಟಿಗೆ ಅನೇಕರು ಪಾಲುದಾರರಾಗಿದ್ದರು. ಯತ್ನಾಳ್ ಈಗ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.