ಚೆನ್ನೈ: ತಮಿಳುನಾಡಿನಲ್ಲಿ ವರುಣನ ಆರ್ಭಟ ಜೋರಾಗಿದ್ದು, ಅವಘಡಕ್ಕೆ ಸಿಲುಕಿ ಮೂವರು ಸಾವನ್ನಪ್ಪಿದ್ದಾರೆ. ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಚೆನ್ನೈ, ಕಾಂಚಿಪುರಂ, ತಿರುವಲ್ಲೂರ್, ಚೆಂಗಲೆಪಟ್ಟು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಈ ಜಿಲ್ಲೆಗಳಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಅತ್ಯಧಿಕ ಅಂದರೆ 20 ಸೆ.ಮೀ.ನಷ್ಟು ಮಳೆಯಾಗಿದ್ದು,
ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಕರಾವಳಿಯಲ್ಲಿ ಉಂಟಾಗಿರುವ ಚಂಡಮಾರುತವು ರಾಜ್ಯದಲ್ಲಿ ಭಾರೀ ಮಳೆಗೆ ಕಾರಣವಾಗಿದೆ. ರಾಜಧಾನಿ ಚೆನ್ನೈನಲ್ಲಿ 20 ಸೆ.ಮೀ.ನಷ್ಟು ಮಳೆಯಾಗಿದ್ದು, ರಸ್ತೆಯಲ್ಲೆಲ್ಲ ಜಲಾವೃತಗೊಂಡಿದೆ. ಮನೆಗಳಿಗೂ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ. ತೀವ್ರ ಮಳೆಯಿಂದಾಗಿ ಸಂಚಾರ ದಟ್ಟಣೆ ಉಂಟಾಗಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ.
