ಕಾಬುಲ್: ಅಫ್ಘಾನಿಸ್ತಾನದ ಅಂಗಡಿ ಮಾಲೀಕರಿಗೆ ತಾಲಿಬಾನ್ ಮನುಷ್ಯಾಕೃತಿಯ ಬೊಂಬೆ ತಲೆಗಳನ್ನು ತೆಗೆದು ಹಾಕುವಂತೆ ಸೂಚಿ ಸಿದೆ. ಮನುಷ್ಯಾಕೃತಿಯ ಬೊಂಬೆಗಳು ಇಸ್ಲಾಮಿಕ್ ಧರ್ಮಕ್ಕೆ ವಿರೋಧವಾದುದು ಎಂಬ ಕಾರಣಕ್ಕೆ ಈ ಹೊಸ ವಿಲಕ್ಷಣ ಆದೇಶ ವನ್ನು ಜಾರಿಗೊಳಿಸಿದೆ. ಕಳೆದ ವರ್ಷ ಆಗಸ್ಟ್‌ನಲ್ಲಿ ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ಬಳಿಕ ಮಹಿಳೆಯರ ಸ್ವಾತಂತ್ರವನ್ನು ಮೊಟಕುಗೊಳಿಸುತ್ತಿದೆ.
ಮಹಿಳೆಯರಿಗೆ ಹಿಜಾಬ್ ಕಡ್ಡಾಯಗೊಳಿಸಿರುವುದರಿಂದ ಹಿಡಿದು ಹದಿಹರೆಯದ ಹೆಣ್ಣು ಮಕ್ಕಳು ಶಾಲೆಗೆ ಹೋಗುವುದನ್ನು ತಡೆಯುವವರೆಗೆ ತಾಲಿಬಾನ್ ಅಮಾನವೀಯ ನೀತಿಗಳನ್ನು ಜಾರಿಗೊಳಿಸಿದೆ. ಇದೀಗ ತಾಲಿಬಾನ್ ಸರ್ಕಾರ ಅಂಗಡಿಗಳಲ್ಲಿ ಬಳಕೆಯಾಗುವ ಮನುಷ್ಯಾಕೃತಿಗಳ ಬೊಂಬೆಗಳ ತಲೆಗಳನ್ನು ತೆಗೆದುಹಾಕುವಂತೆ ಅಫ್ಘಾನಿಸ್ತಾನದ ಜನರಿಗೆ ಸೂಚಿಸಿದೆ.

ಮನುಷ್ಯಾಕೃತಿ ಅಥವಾ ಪ್ರತಿಮೆಗಳು ಇಸ್ಲಾಂ ಧರ್ಮಕ್ಕೆ ವಿರುದ್ಧವಾಗಿವೆ. ಇವುಗಳನ್ನು ವಿರೂಪಗೊಳಿಸಬೇಕು ಎಂದು ಹೆರಾತ್ ಪ್ರಾಂತ್ಯ ಸಚಿವಾಲಯ ಮುಖ್ಯಸ್ಥರಾದ ಅಜೀಜ್ ರಹಮಾನ್ ಹೇಳಿದ್ದಾರೆ. ಮೂಲಗಳ ಪ್ರಕಾರ ಕೆಲವು ಅಂಗಡಿ ಮಾಲೀಕರು ಬೊಂಬೆಗಳ ತಲೆಯನ್ನು ಬಟ್ಟೆಗಳಿಂದ ಮುಚ್ಚಿ ಕಾನೂನಿನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದರು. ಇದನ್ನು ಬಯಲು ಮಾಡುತ್ತಲೇ ದೊಡ್ಡ ಮೊತ್ತದ ದಂಡವನ್ನು ಹಲವು ಅಂಗಡಿ ಮಾಲೀಕರಿಗೆ ವಿಧಿಸಿದೆ.