‘ತೈವಾನ್ ಜೊತೆ ನಿಕಟ ಸಂಬಂಧ ಹೊಂದಲು ಭಾರತ ಎದುರು ನೋಡುತ್ತಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವುದಕ್ಕೆ ಚೀನಾ ಪ್ರತಿಭಟನೆ ದಾಖಲಿಸಿದೆ. ಅಲ್ಲದೆ ತೈವಾನ್ನ ರಾಜಕೀಯ ಲೆಕ್ಕಾಚಾರಗಳನ್ನು ನವದೆಹಲಿ ವಿರೋಧಿಸಬೇಕು ಎಂದೂ ಅದು ಆಗ್ರಹಿಸಿದೆ.
ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಕ್ಕಾಗಿ ಮೋದಿ ಅವರಿಗೆ ತೈವಾನ್ ಅಧ್ಯಕ್ಷ ಲಾಯ್ ಚಿಂಗ್-ಟೆ ಅವರು ‘ಎಕ್ಸ್’ನಲ್ಲಿ ಅಭಿನಂದನಾ ಸಂದೇಶ ಕಳುಹಿಸಿದ್ದರು. ಅದಕ್ಕೆ ಮೋದಿ ಅವರು ಪ್ರತಿಕ್ರಿಯಿಸಿದ್ದರು.
![Demo](https://ainlivenews.com/wp-content/uploads/2023/12/spoorthi-1.jpg)
‘ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣೆಯಲ್ಲಿ ವಿಜಯ ಸಾಧಿಸಿದ್ದಕ್ಕಾಗಿ ಅಭಿನಂದನೆಗಳು. ತೈವಾನ್ ಮತ್ತು ಭಾರತದ ಪಾಲುದಾರಿಕೆಯನ್ನು ಹೆಚ್ಚಿಸಲು ನಾವು ಎದುರು ನೋಡುತ್ತಿದ್ದೇವೆ. ಇಂಡೋಪೆಸಿಫಿಕ್ನಲ್ಲಿ ಶಾಂತಿ, ಸಮೃದ್ಧಿ ನೆಲೆಸಲು, ವ್ಯಾಪಾರ, ತಂತ್ರಜ್ಞಾನ ಮತ್ತು ಇತರ ವಲಯಗಳಲ್ಲಿ ಸಹಯೋಗವನ್ನು ವಿಸ್ತರಿಸಲು ಬಯಸುತ್ತಿರುವುದಾಗಿ’ ತೈವಾನ್ ಅಧ್ಯಕ್ಷ ಲಾಯ್ ಚಿಂಗ್-ಟೆ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ಮೋದಿ ಅವರು, ‘ಅಭಿನಂದಿಸಿದ್ದಕ್ಕೆ ಧನ್ಯವಾದಗಳು. ನಿಕಟ ಸಂಬಂಧದ ಜತೆಗೆ ಪರಸ್ಪರ ಆರ್ಥಿಕ, ತಾಂತ್ರಿಕ ಪಾಲುದಾರಿಕೆಯಲ್ಲಿ ಕೆಲಸ ಮಾಡುವುದನ್ನು ಎದುರು ನೋಡುತ್ತಿದ್ದೇವೆ’ ಎಂದು ಹೇಳಿದ್ದರು.
“ತೈವಾನ್ ಜೊತೆಗೆ ಭಾರತ ಯಾವುದೇ ಸಂಪರ್ಕ ಹೊಂದಿರಬಾರದು. ಅದು ಚೀನಾದ ಭೂಭಾಗವಾಗಿದೆ. ತೈವಾನ್ನಲ್ಲಿ ಯಾವುದೇ ಅಧ್ಯಕ್ಷರೂ ಇಲ್ಲ. ಮೋದಿ ಅವರ ತೈವಾನ್ ಜೊತೆಗಿನ ಸಂಬಂಧ ಮುಂದುವರಿಕೆ ಹೇಳಿಕೆಗೆ ಆಕ್ಷೇಪವಿದೆ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಮಾವೋ ನಿಂಗ್ ಹೇಳಿದ್ದಾರೆ.
ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿರುವ ಅವರು, ತೈವಾನ್ ಜೊತೆಗೆ ರಾಜತಾಂತ್ರಿಕ ಸಂಬಂಧ ಹೊಂದಿರುವ ಯಾವುದೇ ರಾಷ್ಟ್ರಗಳ ಅಧಿಕೃತ ಮಾತುಕತೆಯನ್ನು ಚೀನಾ ವಿರೋಧಿಸುತ್ತದೆ. ತೈವಾನ್ ದ್ವೀಪ ಚೀನಾ ಭೂಪ್ರದೇಶದ ಬೇರ್ಪಡಿಸಲಾಗದ ಭಾಗವಾಗಿದೆ. ‘ಒನ್ ಚೀನಾ’ ತತ್ವಕ್ಕೆ ಯಾವುದೇ ರಾಷ್ಟ್ರಗಳು ಅಡ್ಡಿಯಾಗಬಾರದು. ಭಾರತವು ತೈವಾನ್ ಜೊತೆಗೆ ರಾಜತಾಂತ್ರಿಕ ಮತ್ತು ವ್ಯಾಪಾರ ಸಂಬಂಧಗಳನ್ನು ವೃದ್ಧಿಸುವ ಬಗ್ಗೆ ಮಾತನಾಡಿದೆ. ತೈವಾನ್ ಅಧಿಕಾರಿಗಳ ರಾಜಕೀಯ ಹೇಳಿಕೆಗಳನ್ನು ಅದು ವಿರೋಧಿಸಬೇಕು. ಇಲ್ಲವಾದಲ್ಲಿ ಚೀನಾದ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದಿದ್ದಾರೆ.
ದ್ವೀಪರಾಷ್ಟ್ರ ತೈವಾನ್ ಅನ್ನು ವಶಪಡಿಸಿಕೊಳ್ಳಲು ಚೀನಾ ಹವಣಿಸುತ್ತಿದ್ದು, ಆ ದೇಶದ ಸುತ್ತಲೂ ವಿಮಾನ, ಯುದ್ಧ ನೌಕೆಗಳನ್ನು ಗಸ್ತು ತಿರುಗಿಸುತ್ತಿದೆ. ಇದನ್ನು ತೈವಾನ್ ಸರ್ಕಾರ ತೀವ್ರವಾಗಿ ವಿರೋಧಿಸುತ್ತಿದೆ. ತೈವಾನ್ ಸ್ವತಂತ್ರ ರಾಷ್ಟ್ರವಾಗಿರಲು ಬಯಸುತ್ತದೆ ಎನ್ನಲಾಗುತ್ತಿದೆ.
![](https://ainlivenews.com/wp-content/uploads/2024/01/Ad-Banner-copy-scaled.jpg)