ಬೆಳಗಾವಿ:- ಇಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಪಾಲ್ಗೊಂಡ ಟಿಎ ಶರವಣ ಅವರು, ಕೆ. ಆರ್.ಮಾರುಕಟ್ಟೆ ಮತ್ತು ಕಲಾಸಿಪಾಳ್ಯದ ಅಸ್ವಚ್ಛತೆ, ರಸ್ತೆ ದುರಸ್ಥಿ ಮತ್ತು ಕಳ್ಳತನ ಹೆಚ್ಚಿತ್ತಿರುವ ವಿಚಾರವಾಗಿ ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿದರು.
ಒಂದು ನಗರ ಅಭಿವೃದ್ಧಿಯಾಗಿದೆ ಎಂದು ತಿಳಿಯುವುದೇ ಅದರ ಸ್ವಚ್ಛತೆಯ ಆಧಾರದ ಮೇಲೆ ಎಂದು ತಿಳಿಸಿದರು.
ಬೆಂಗಳೂರು ಐಟಿ ಹಬ್,ಸಿಲಿಕಾನ್ ಸಿಟಿ ಎಂದೆಲ್ಲ ಪ್ರಸಿದ್ಧವಾಗಿದೆ, ಆದರೆ ಬೆಂಗಳೂರಿನ ಹೃದಯ ಭಾಗವಾದ ಕಲಾಸಿಪಾಳ್ಯ ಮತ್ತು ಕೆ ಆರ್ ಮಾರುಕಟ್ಟೆಯ ಬಸ್ ನಿಲ್ದಾಣ ಕಸದ ಕೊಂಪೆಯಾಗಿದೆ. ಇಂಥ ಜನದಟ್ಟಣೆ ಅಧಿಕವಾಗಿರುವ ಪ್ರದೇಶಗಳಲ್ಲಿ ನೈರ್ಮಲ್ಯತೆ ಕಾಪಾಡಿಕೊಳ್ಳದೆ ಇರುವುದು ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುತ್ತದೆ. ಬೀದಿಬದಿ ವ್ಯಾಪಾರಸ್ಥರಿಗೆ, ವಾಹನ ಸಂಚಾರಕ್ಕೆ ಇದರಿಂದ ತೊಂದರೆಯಾಗುತ್ತಿದೆ ಎಂದು ತಿಳಿಸಿದ್ದರು.
ಪ್ರತಿದಿನ ಸ್ವಚ್ಛತಾ ಕಾರ್ಯ ನಡೆಯುತ್ತಿದ್ದರು ಅದು ಹೆಸರಿಗಷ್ಟೇ ಸೀಮಿತವಾಗಿದೆ, ಆದರೆ ಸ್ವಚ್ಛತೆ ಎಂಬುದು ಮರಿಚಿಕೆ ಇಲ್ಲಿ. ಅಲ್ಲದೆ ಪೊಲೀಸ್ ಠಾಣೆ ಹತ್ತಿರದಲ್ಲೇ ಇದ್ದರೂ ಕೂಡ ಕಳ್ಳತನದ ಸಂಖ್ಯೆ ಹೆಚ್ಚುತ್ತಲೇ ಇದೆ. ಸ್ವಚ್ಛತೆ ಹಾಗೂ ಕಳ್ಳತನ ನಿಯಂತ್ರಣದ ಕುರಿತಂತೆ ಕಠಿಣ ಹಾಗೂ ಸೂಕ್ತ ಕ್ರಮಗಳನ್ನು ಕೈಕೊಂಡು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿದರು.