ನಾಳೆಯಿಂದ ಇಂಗ್ಲೆಂಡ್ ವಿರುದ್ಧದ ಮೂರು ಟಿ20 ಪಂದ್ಯಗಳ ಕ್ರಿಕೆಟ್ ಸರಣಿ ಆರಂಭವಾಗಲಿದ್ದು, ಚುಟುಕು ಮಾದರಿಯಲ್ಲಿ ಯಶಸ್ಸು ಕಂಡಿರುವ ಹರ್ಮನ್ಪ್ರೀತ್ ಕೌರ್ ಪಡೆ ಗೆಲುವಿನ ಓಟ ಮುಂದುವರೆಸುವ ಲೆಕ್ಕಾಚಾರದಲ್ಲಿದೆ.
ಹರ್ಮನ್ಪ್ರೀತ್ ಕೌರ್ ನೇತೃತ್ವದಲ್ಲಿ ತಂಡ ಯಶಸ್ವಿ ಕ್ರಿಕೆಟ್ ವರ್ಷವನ್ನು ಕಂಡಿದೆ. ಏಷ್ಯನ್ ಗೇಮ್ಸ್ನಲ್ಲಿ ಚಿನ್ನದ ಪದಕ, ಬಾಂಗ್ಲಾದೇಶ ವಿರುದ್ಧದ 2-1 ಅಂತರದಲ್ಲಿ ಸರಣಿ ಜಯಿಸಿತ್ತು. ಅಲ್ಲದೇ ದಕ್ಷಿಣ ಆಫ್ರಿಕಾದಲ್ಲಿ ನಡೆದ ವೆಸ್ಟ್ ಇಂಡೀಸ್ ಒಳಗೊಂಡ ತ್ರಿಕೋನ ಸರಣಿಯಲ್ಲಿ ಫೈನಲ್ ಪ್ರವೇಶಿಸಿತ್ತು.
ಇನ್ನೊಂದೆಡೆ, ಇಂಗ್ಲೆಂಡ್ ವನಿತೆಯರು ತವರಿನಲ್ಲಿ ಶ್ರೀಲಂಕಾ ವಿರುದ್ಧ 1-2 ಅಂತರದಲ್ಲಿ ಸೋತ ನಿರಾಶೆ ನೀಗಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ. ಅಲ್ಲದೇ ತಂಡವು ಭಾರತದಲ್ಲಿ ಉತ್ತಮ ಪ್ರದರ್ಶನ ನೀಡಿರುವ ದಾಖಲೆೆ ಹೊಂದಿದೆ. ಐಸಿಸಿ ಶ್ರೇಯಾಂಕದಲ್ಲಿ 4ನೇ ಸ್ಥಾನದಲ್ಲಿರುವ ಭಾರತವು ಇಂಗ್ಲೆಂಡ್ ವಿರುದ್ಧ ತವರಿನಲ್ಲಿ 9 ಪಂದ್ಯಗಳನ್ನಾಡಿದ್ದು, ಕೇವಲ 2ರಲ್ಲಿ ಮಾತ್ರ ಗೆಲುವು ಸಾಧಿಸಿದೆ. ಆಂಗ್ಲ ವನಿತೆಯರು ಇದೇ ಭರವಸೆಯಲ್ಲಿ ಮೈದಾನಕ್ಕಿಳಿಯಲಿದ್ದಾರೆ. ಇದಲ್ಲದೇ ಎಲ್ಲಾ ಮಾದರಿಯ ಕ್ರಿಕೆಟ್ನಲ್ಲಿ ಭಾರತ ಮತ್ತು ಇಂಗ್ಲೆಂಡ್ 27 ಬಾರಿ ಮುಖಾಮುಖಿಯಾಗಿದ್ದು ಕೇವಲ 7ರಲ್ಲಿ ಗೆದ್ದಿದೆ.