ಬೆಳಗಾವಿ: ನೈಸ್ (NICE) ಸಂಸ್ಥೆಗೆ ಕೊಟ್ಟರುವ ಹೆಚ್ಚುವರಿ ಭೂಮಿಯನ್ನು ಸರ್ಕಾರ (Karnataka Government) ವಾಪಸ್ ಪಡೆಯಲಿದೆ ಎಂದು ಸಣ್ಣ ಕೈಗಾರಿಕಾ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಶರಣಬಸಪ್ಪ ಗೌಡ ದರ್ಶನಾಪುರ ತಿಳಿಸಿದ್ದಾರೆ. ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ತುಳಸಿ ಮುನಿರಾಜುಗೌಡ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು,
554 ಎಕರೆ ನೈಸ್ ಕೊಟ್ಟ ಜಾಗವನ್ನು ನಾವು ವಾಪಸ್ ಪಡೆಯುತ್ತೇವೆ. ಆದಷ್ಟು ಬೇಗ ಜಾಗ ಹಿಂಪಡೆದುಕೊಳ್ಳುತ್ತೇವೆ. 554 ಎಕರೆ ಜಾಗದ ಪರಿಶೀಲನೆ ಮಾಡಲು ಸೂಚನೆ ನೀಡಲಾಗಿದೆ. ಜಮೀನಿನ ಸರ್ವೆ ಕಾರ್ಯ ನಡೆಯುತ್ತಿದೆ. ಸರ್ವೆ ಕಾರ್ಯ ಮುಗಿದ ಕೂಡಲೇ ಜಮೀನು ವಶಪಡಿಸಿಕೊಳ್ಳುತ್ತೇವೆ ಎಂದು ಭರವಸೆ ಕೊಟ್ಟರು.
ಮುನಿರಾಜುಗೌಡ ಹೇಳಿದ್ದೇನು?
ಕೆಐಎಡಿಬಿ (KIADB) ನೈಸ್ ಸಂಸ್ಥೆಗೆ ಕೊಟ್ಟಿರುವ ಹೆಚ್ಚುವರಿ 554 ಎಕರೆ ಜಮೀನು ಹಸ್ತಾಂತರ ಮಾಡಿದೆ. ಹೆಚ್ಚುವರಿ ಭೂಮಿ ಕೊಟ್ಟಿರುವ ಬಗ್ಗೆ ಸುಪ್ರೀಂಕೋರ್ಟ್ನಲ್ಲಿ (Supreme Court) ನಲ್ಲಿ ಸರ್ಕಾರ ಪ್ರಮಾಣ ಪತ್ರ ನೀಡಿದೆ. ಕೂಡಲೇ ಸರ್ಕಾರ ನೈಸ್ಗೆ ಕೊಟ್ಟಿರಿವ 554 ಎಕರೆ ಜಮೀನು ವಾಪಸ್ ಪಡೆಯಬೇಕು.
ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ನಿಂದ ಛೀಮಾರಿ ಹಾಕಿದ್ದರೂ ಭೂಮಿ ವಶಪಡಿಸಿಕೊಂಡಿಲ್ಲ. ದಪ್ಪ ಚರ್ಮದ ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ. ಅಧಿಕಾರಿಗಳು ಜಾಗ ವಶಪಡಿಸಿಕೊಳ್ಳುವ ಕೆಲಸ ಮಾಡಿಲ್ಲ. ಎಇ ಯತೀರಾಜ್ ಅವರನ್ನು ಕೇಳಿದರೆ ಉಡಾಫೆ ಉತ್ತರ ನೀಡುತ್ತಾರೆ.
ಜಮೀನು ಕೊಟ್ಟವರಿಗೆ ಸರಿಯಾಗಿ ಪರಿಹಾರ ಸಿಕ್ಕಿಲ್ಲ. ಸತ್ತರೆ ಪಾಪ ಜಮೀನು ಕೊಟ್ಟವರಿಗೆ ಹೂಳಲು ಜಾಗ ಕೊಡುತ್ತಿಲ್ಲ. ರೈತರಿಗೆ ಪರ್ಯಾಯ ಜಮೀನು ಕೊಡುವ ಭರವಸೆ ಕೊಟ್ಟಿದ್ದರು. ಆದರೆ ಅದನ್ನು ಕೊಡುತ್ತಿಲ್ಲ. ಕೂಡಲೇ ನೈಸ್ಗೆ ಕೊಟ್ಟಿರುವ ಹೆಚ್ಚುವರಿ ಭೂಮಿ ವಾಪಸ್ ಪಡೆಯಬೇಕು ಅಂತ ಆಗ್ರಹ ಮಾಡಿದರು