ಬೆಂಗಳೂರು/ ತಿರುಪತಿ: ತಿರುಮಲ ಲಡ್ಡು ಪ್ರಸಾದ ತಯಾರಿಗಾಗಿ ಕರ್ನಾಟಕ ಸರ್ಕಾರದ ‘ನಂದಿನಿ’ ಬ್ರಾಂಡ್ ತುಪ್ಪದ ಪೂರೈಕೆ ಪುನರಾರಂಭಗೊಂಡಿದೆ. 350 ಟನ್ ತುಪ್ಪ ಪೂರೈಸುವಂತೆ ಟಿಟಿಡಿ ಮನವಿ ಮಾಡಿದ ಹಿನ್ನೆಲೆಯಲ್ಲಿ ಅದರ ಪೂರೈಕೆಯನ್ನು ಪುನರಾರಂಭಿಸಲಾಗಿದೆ ಎಂದು ಕರ್ನಾಟಕ ಹಾಲು ಒಕ್ಕೂಟದ ಅಧಿಕಾರಿಗಳು ತಿಳಿಸಿದ್ದಾರೆ. ಇದೀಗ ಟಿಟಿಡಿ ಅಧಿಕೃತವಾಗಿ ತಿರುಪತಿ ಲಡ್ಡು ತಯಾರಿಗೆ ನಂದಿನಿ ತುಪ್ಪದ ಬಳಕೆಯನ್ನು ಆರಂಭಿಸಿದೆ.
ತಿರುಮಲ ತಿರುಪತಿ ಭಕ್ತರಿಗೆ ಅತ್ಯಂತ ಪ್ರಿಯವಾದ ಪ್ರಸಾದವಾದ ಲಡ್ಡು ರುಚಿ, ಪರಿಮಳ ಹಾಗೂ ಗುಣಮಟ್ಟ ಹೆಚ್ಚಾಗಲಿದೆ. ತಿರುಮಲ ಶ್ರೀವಾರಿ ಭಕ್ತರಿಗೆ ನೀಡುವ ಲಡ್ಡು ಪ್ರಸಾದದ ಗುಣಮಟ್ಟ ಹೆಚ್ಚಿಸಲು ಟಿಟಿಡಿ ಕ್ರಮ ಕೈಗೊಂಡಿದೆ. ಲಡ್ಡು ಪ್ರಸಾದದ ಗುಣಮಟ್ಟದ ಬಗ್ಗೆ ಭಕ್ತರಿಂದ ಬರುತ್ತಿರುವ ಟೀಕೆಗಳನ್ನು ಪರಿಶೀಲಿಸಲು ಪ್ರಯತ್ನಿಸುತ್ತಿದೆ. ಇದೀಗ ಶ್ರೀವಾರಿ ಲಡ್ಡು ಪ್ರಸಾದಕ್ಕೆ ಕರ್ನಾಟಕ ಸರ್ಕಾರದ ಬ್ರಾಂಡ್ ಆದ ನಂದಿನಿ ತುಪ್ಪದ ಬಳಕೆಯನ್ನು ಅಧಿಕೃತವಾಗಿ ಆರಂಭಿಸಲಾಗಿದೆ.
ನಂದಿನಿ ಡೈರಿ ತುಪ್ಪದಲ್ಲಿ ಗುಣಮಟ್ಟವನ್ನು ಅನುಸರಿಸುವ ಕಂಪನಿಯಾಗಿ ಗುರುತಿಸಿಕೊಂಡಿರುವುದರಿಂದ ಟಿಟಿಡಿ ಈ ನಿರ್ಧಾರ ಕೈಗೊಂಡಿದೆ. ಟಿಟಿಡಿ ಬೆಂಗಳೂರಿನ ಹಾಲು ಪರೀಕ್ಷಾ ಪ್ರಯೋಗಾಲಯದ ಮೂಲಕ ನಂದಿನಿ ಕಂಪನಿ ತಯಾರಿಸುವ ತುಪ್ಪದ ಗುಣಮಟ್ಟವನ್ನು ಪರೀಕ್ಷಿಸಿ, ಆ ತುಪ್ಪವನ್ನು ಲಡ್ಡು ತಯಾರಿಸಲು ನಿರ್ಧರಿಸಿದೆ. ಭವಿಷ್ಯದಲ್ಲಿ ಭಾರತದ ಎಲ್ಲಾ ಟಿಟಿಡಿ ದೇವಾಲಯಗಳಲ್ಲಿ ಭಕ್ತರಿಗೆ ಲಡ್ಡು ಪ್ರಸಾದ ನೀಡಲು ಕ್ರಮ ಕೈಗೊಂಡಿರುವ ಟಿಟಿಡಿ, ಲಡ್ಡು ಪ್ರಸಾದ ತಯಾರಿಕೆಗೆ ನಂದಿನಿ ತುಪ್ಪವನ್ನು ಬಳಸಲಾಗುತ್ತಿದೆ ಎಂದು ತಿಳಿಸಿದೆ.