ಮುಂಗಾರಿನಲ್ಲಿ ವಾಡಿಕೆಯಂತೆ ಮಳೆ ಸುರಿಯದೇ ಕಬ್ಬಿನ ಇಳುವರಿ ಕುಸಿದಿದ್ದು, ಕೈ ತುಂಬಾ ಆದಾಯದ ನಿರೀಕ್ಷೆಯಲ್ಲಿದ್ದ ರೈತರು ಸಾಲದ ಸುಳಿಗೆ ಸಿಲುಕುವಂತಾಗಿದೆ. ಹೊಸಪೇಟೆ ತಾಲೂಕು ಸೇರಿ ಜಿಲ್ಲೆಯಲ್ಲಿ ಅಂದಾಜು 10 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗಿದೆ. ಬೆಲ್ಲದರಾಜ, ಜೈಭೀಮ್ ಸೇರಿ 517 ತಳಿಯ ಕಬ್ಬು ಬೆಳೆಯಲಾಗಿದೆ. ಆದರೆ ಈ ಬಾರಿ ಮಳೆಯಾಗದೇ ಕಬ್ಬಿನ ಬೆಳೆಗಳಿಗೆ ನಾನಾ ರೀತಿಯ ರೋಗಗಳು ಅಂಟಿಕೊಂಡರೆ, ಇನ್ನೊಂದೆಡೆ ಸಮರ್ಪಕ ನೀರು ಹರಿಯದೇ ಬೆಳವಣಿಗೆಯಲ್ಲಿ ಕುಂಠಿತ ಕಂಡಿದೆ. ಈ ಬಾರಿ ಕಬ್ಬಿನ ಇಳುವರಿ ಕಡಿಮೆಯಾಗಿದ್ದು, ಕಳೆದ ಬಾರಿಗಿಂತ ಅರ್ಧದಷ್ಟು ಇಳುವರಿ ಬಾರದೇ ರೈತ ವ್ಯಥೆಪಡುವಂತಾಗಿದೆ.
ಸಾಮಾನ್ಯವಾಗಿ ಒಬ್ಬ ರೈತ ಒಂದು ಎಕರೆ ಕಬ್ಬಿನ ಬೆಳೆಗೆ 40 ರಿಂದ 50 ಸಾವಿರ ರೂ. ಖರ್ಚು ಮಾಡುತ್ತಾನೆ. ಬೆಲ್ಲದರಾಜ ಕಬ್ಬು ಒಂದು ಎಕರೆಗೆ 40 ರಿಂದ 60 ಟನ್ವರೆಗೆ ಬೆಳೆಯಲಾಗುತ್ತದೆ. ಜೈ ಭೀಮ್ 30 ರಿಂದ 45 ಟನ್ ಬೆಳೆಯಲಾಗುತ್ತದೆ. 517 ತಳಿಯ ಕಬ್ಬು 60 ರಿಂದ 100 ಟನ್ ಬೆಳೆದ ಉದಾಹರಣೆಗಳಿವೆ. ಆದರೆ ಮುಂಗಾರಿನಲ್ಲಿ ಮಳೆ ಸುರಿಯದೇ ಹಿಂದಿನ ವರ್ಷಗಳ ಇಳುವರಿಗಿಂತ ಈ ಬಾರಿ ಶೇ.50 ರಷ್ಟು ಕುಂಠಿತವಾಗಿದೆ. ಇನ್ನು ರೋಗದ ಸುಳಿಗೆ ಸಿಲುಕಿದ ಕೆಲ ಕಬ್ಬು ಶೇ.30 ರಷ್ಟು ಕೂಡ ಇಳುವರಿ ಬಂದಿಲ್ಲ. ಉತ್ತಮ ಲಾಭದ ನಿರೀಕ್ಷೆಯಲ್ಲಿದ್ದ ರೈತರಿಗೆ ನಿರಾಸೆಯಾಗಿದೆ.