ಬೆಂಗಳೂರು:- ರಾಜಧಾನಿ ಬೆಂಗಳೂರು ಮಂದಿ ಇ-ಖಾತಾ ಪಡೆಯಲು ಪರದಾಟ ನಡೆಸಿದ್ದು, ಸರ್ವರ್ ಸಮಸ್ಯೆ ಎದುರಾಗುತ್ತಿದೆ. ಹೀಗಾಗಿ ಅಧಿಕಾರಿಗಳ ನಡೆಯಿಂದ ಜನ ಕಂಗಾಲಾಗಿದ್ದಾರೆ.
ಬೆಂಗಳರು ಒನ್ ಕೇಂದ್ರಗಳಲ್ಲಿ ಇ-ಖಾತಾ ಪಡೆಯಲು ಅವಕಾಶ ನೀಡಿದ್ದರೂ ಜನರಿಗೆ ಮಾತ್ರ ಸಮಸ್ಯೆ ತಪ್ಪದಂತಾಗಿದೆ. ದಾಖಲೆಗಳು ಸರಿಯಿದ್ದರೆ ಸರ್ವರ್ ಇರಲ್ಲ, ಸರ್ವರ್ ಸರಿಯಿದ್ದರೆ ದಾಖಲೆ ಇಲ್ಲ ಎಂಬ ಸಂದಿಗ್ದ ಪರಿಸ್ಥಿತಿಗೆ ಸಿಲುಕಿರುವ ಜನರು ಇ-ಖಾತಾ ಪಡೆಯೋಕೆ ಪರದಾಡುತ್ತಿದ್ದಾರೆ.
ಸದ್ಯ ಕೃಷಿಭೂಮಿಯಿಂದ ಪರಿವರ್ತನೆಯಾದ ಜಾಗಗಳು, ಬಿಡಿಎ ಸ್ವಾಧೀನ ಬಳಿಕ ಕೈಬಿಟ್ಟ ಜಾಗಗಳು, ಎ ಖಾತಾ, ಬಿ ಖಾತಾ ಪಡೆಯುವಾಗ ಮ್ಯಾನುವಲ್ ಇದ್ದಿದ್ದರಿಂದ ಕೆಲ ದಾಖಲೆಗಳು ಇಲ್ಲದಿದ್ದರೂ ಖಾತಾ ಲಭ್ಯವಾಗಿದೆ. ಆದರೆ, ಇದೀಗ ಇ-ಖಾತಾ ಮಾಡಿಸಲು ಕೆಲ ದಾಖಲೆಗಳು ಸೂಕ್ತ ರೀತಿಯಲ್ಲಿ ಒದಗಿಸಲು ಆಗದಿರುವುದರಿಂದ ಜನರಿಗೆ ಸಂಕಷ್ಟವಾಗಿದೆ. ಕಟ್ಟಡ ಮಂಜೂರು ನಕ್ಷೆ, ಕೂಡ ಹಲವು ಮಾಲೀಕರ ಬಳಿ ಇಲ್ಲದಿರುವುದು ಕೂಡ ಸಮಸ್ಯೆಗೆ ಕಾರಣವಾಗಿದೆ. ಇ-ಖಾತಾ ಪಡೆಯಲು ಇನ್ನೂ ಪರದಾಡವ ಸ್ಥಿತಿ ನಿರ್ಮಾಣವಾಗಿದೆ. ಇ-ಖಾತಾ ಪಡೆಯಲು ಹೋದರೆ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂಬ ಆರೋಪ ಕೂಡ ಕೇಳಿಬರುತ್ತಿದ್ದು, ಇ-ಖಾತಾ ಸಮಸ್ಯೆಗಳನ್ನು ಬಗೆಹರಿಸದ ಪಾಲಿಕೆ ವಿರುದ್ಧ ಜನರು ಕಿಡಿಕಾರುತ್ತಿದ್ದಾರೆ.
ಇತ್ತ ಇ-ಖಾತಾ ಸಮಸ್ಯೆಗೆ ಹೆಲ್ಪ್ ಲೈನ್ ಬಿಟ್ಟು ಸೈಲೆಂಟ್ ಆಗಿರೋ ಪಾಲಿಕೆ ಖಾತಾ ಸಮಸ್ಯೆ ಬಗೆಹರಿಸೋಕೆ ಎಷ್ಟೇ ಸರ್ಕಸ್ ಮಾಡಿದ್ರೂ ಪರಿಹಾರ ಸಿಗದಂತಾಗಿದೆ. ಸದ್ಯ ಪಾಲಿಕೆ ವ್ಯಾಪ್ತಿಯಲ್ಲಿ ಇ-ಖಾತಾ ಅರ್ಜಿಗಳಿಗೆ ಸಂಬಂಧಿಸಿದಂತೆ ಇದುವರೆಗೆ ಒಟ್ಟು 46,962 ಅರ್ಜಿಗಳು ಬಂದಿದ್ದು, ಈ ಪೈಕಿ ಈಗಾಗಲೇ 39,784 ಅರ್ಜಿಗಳಿಗೆ ಅನುಮೋದನೆ ನೀಡಿ ಅಂತಿಮ ಇ-ಖಾತಾ ನೀಡಲಾಗಿದೆ. ಆದರೆ, ಇನ್ನೂ ಲಕ್ಷಗಟ್ಟಲೇ ಆಸ್ತಿ ಮಾಲೀಕರು ಇ-ಖಾತಾ ಪಡೆಯಲು ಪರದಾಡುತ್ತಿದ್ದು, ಜನರು ಸುಸ್ತಾಗಿದ್ದಾರೆ.