ಬೆಂಗಳೂರು:- ಮುಂದಿನ 5 ವರ್ಷದಲ್ಲಿ ಕರ್ನಾಟಕ ಏಡ್ಸ್ಮುಕ್ತ ಮಾಡುವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಸಂಬಂಧ ವಿಧಾನಸೌಧದಲ್ಲಿ ಆರೋಗ್ಯ ಇಲಾಖೆ ವತಿಯಿಂದ ಆಯೋಜಿಸಲಾದ ವಿಶ್ವ ಏಡ್ಸ್ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮುಂದಿನ ಐದು ವರ್ಷಗಳಲ್ಲಿ ದೇಶ ಮತ್ತು ರಾಜ್ಯವನ್ನು ಏಡ್ಸ್ ಮುಕ್ತಗೊಳಿಸಬೇಕಾಗಿದ್ದು, ಈ ನಿಟ್ಟಿನಲ್ಲಿ ಎಲ್ಲರೂ ಒಟ್ಟಾಗಿ ಕಾರ್ಯಪ್ರವೃತ್ತರಾಗಬೇಕು ಎಂದರು.
ಎಚ್ಐವಿ ಮಾರಕ ಸಾಂಕ್ರಾಮಿಕ ರೋಗವಾಗಿದ್ದು, ಇದನ್ನು ತಡೆಗಟ್ಟುವುದು ಎಲ್ಲರ ಜವಾಬ್ದಾರಿಯಾಗಿದೆ.
1981ರಲ್ಲಿ ಮೊದಲು ಇದು ಕಾಣಿಸಿಕೊಂಡಿತ್ತು. 1986ರಲ್ಲಿ ಭಾರತದಲ್ಲಿ, 1996ರಲ್ಲಿ ರಾಜ್ಯದಲ್ಲಿ ಕಾಣಿಸಿಕೊಂಡಿತು. ಇತ್ತೀಚಿನ ದಿನಗಳಲ್ಲಿ ಎಚ್ಐವಿಪೀಡಿತರ ಸಂಖ್ಯೆ ಹಾಗೂ ಅದರ ಹರಡುವಿಕೆಯೂ ಕಡಿಮೆಯಾಗುತ್ತಿದೆ. ಇದು ಒಳ್ಳೆಯ ಬೆಳವಣಿಗೆಯಾಗಿದೆ ಎಂದು ಹೇಳಿದರು.
ನಮ್ಮ ಸಮಾಜವನ್ನು ಎಚ್ಐವಿ ಮುಕ್ತ ಸಮಾಜವನ್ನಾಗಿ ಮಾಡಬೇಕು. ಇದಕ್ಕಾಗಿ ಜನರಲ್ಲಿ ಮತ್ತು ಯುವಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಬೇಕು. 2015-2020ರವರೆಗೆ ಏಡ್ಸ್ಪೀಡಿತರ ಸಂಖ್ಯೆಯನ್ನು ಸೊನ್ನೆಗೆ ತನ್ನಿ ಎಂಬ ಘೋಷವಾಕ್ಯವಿತ್ತು. ಆದರೆ ಈ ಗುರಿಯನ್ನು ಇನ್ನೂ ಸಾಧಿಸಲಾಗಿಲ್ಲ. ಈ ಘೋಷಣೆಯನ್ನು ಕಾರ್ಯರೂಪಕ್ಕೆ ತರುವುದು ಕೇವಲ ಆರೋಗ್ಯ ಇಲಾಖೆಯ ಹೊಣೆಯಾಗಿರದೆ, ಇಡೀ ಸಮಾಜದ ಹೊಣೆಯಾಗಿದೆ. ಸೋಂಕಿನ ಪ್ರಮಾಣದಲ್ಲಿ ಜಗತ್ತಿನಲ್ಲಿ ನಾವು ಮೂರನೇ ಸ್ಥಾನದಲ್ಲಿದ್ದೇವೆ. ಅದಕ್ಕಾಗಿ ಹೆಚ್ಚು ಜಾಗೃತರಾಗಿರುವ ಅಗತ್ಯವಿದೆ ಎಂದರು.