ಬೆಂಗಳೂರು : ಈಗಾಗಲೇ ಹಲವು ದೇಶಗಳಲ್ಲಿ ಅಬ್ಬರಿಸುತ್ತಿರುವ ಒಮಿಕ್ರೋನ್ ಭಾರತಕ್ಕೂ ಕಾಲಿಟ್ಟಿದೆ. ಈಗಾಗಲೇ ದೇಶದಲ್ಲಿ ಮೂರನೇ ಅಲೆಯ ಮನ್ಸೂಚನೆ ಕೊಟ್ಟಿರುವ ಒಮಿಕ್ರೋನ್ ಮುಂದಿನ ದಿನಗಳಲ್ಲ ಅಬ್ಬರಿಸುವ ಎಲ್ಲಾ ಲಕ್ಷಣಗಳಿದೆ. ಹಾಗಂತ ರಾಜ್ಯದ ಪರಿಸ್ಥಿತಿಯೂ ಭಿನ್ನವಾಗಿಲ್ಲ.
ಎರಡನೇ ಅಲೆಯ ಸಂದರ್ಭದಲ್ಲಿ ಡೆಲ್ಟಾ ಮಾಡಿದ ಅನಾಹುತದಿಂದ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ಒಮಿಕ್ರೋನ್ ನಿಯಂತ್ರಣಕ್ಕೆ ಈಗಾಗಲೇ ಸಿದ್ದತೆ ಪ್ರಾರಂಭಿಸಿದೆ. ಐಸಿಯು ಬೆಡ್ ಗಳ ಸಂಖ್ಯೆಯನ್ನು 3860 ರಿಂದ 7,051ಕ್ಕೆ ಏರಿಸಲಾಗಿದೆ. ಜೊತೆಗೆ 30 ಸಾವಿರ ಆಕ್ಸಿಜನ್ ಬೆಡ್ ಗಳನ್ನು ಸಜ್ಜುಗೊಳಿಸಲಾಗಿದ್ದು ಸೂಕ್ತ ಮೆಡಿಸಿನ್ ಗಳನ್ನು ಕೂಡಾ ದಾಸ್ತಾನು ಮಾಡಿಕೊಳ್ಳಲಾಗಿದೆ.

ಇನ್ನು ಒಮಿಕ್ರೋನ್ ಅತ್ಯಂತ ವೇಗವಾಗಿ ಹರಡುವ ರೂಪಾಂತರಿ ವೈರಸ್ ಆಗಿರುವ ಕಾರಣ, ಸೋಂಕು ಪತ್ತೆ ಕಾರ್ಯವೂ ಅಷ್ಟೇ ವೇಗದಲ್ಲಿ ನಡೆಯಬೇಕಾಗಿದೆ. ಪತ್ತೆ ಕಾರ್ಯ ಶೀಘ್ರವಾಗಿ ನಡೆದರೆ ಸೋಂಕು ನಿಯಂತ್ರಣವೂ ಸುಲಭವಾಗಲಿದೆ. ಹೀಗಾಗಿ ಒಮಿಕ್ರೋನ್ ತಳಿಯನ್ನು ಪತ್ತೆ ಮಾಡಲು ಥರ್ಮೋ ಫಿಷರ್ ಅನ್ನುವ ಸಾಧನ ಖರೀದಿಸಲು ಆರೋಗ್ಯ ಇಲಾಖೆ ನಿರ್ಧರಿಸಿದೆ.