ದುಬೈ : ಪಂದ್ಯದ ಎಲ್ಲಾ ವಿಭಾಗಗಳಲ್ಲೂ ಆಕರ್ಷಕ ನಿರ್ವಹಣೆ ತೋರಿದ ಭಾರತ ತಂಡ ಅಂಡರ್ 19 ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ 8ನೇ ಬಾರಿಗೆ ಚಾಂಪಿಯನ್ ಆಗಿದೆ. ಶುಕ್ರವಾರ ದುಬೈ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಮಳೆಬಾಧಿತ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಡಕ್ ವರ್ತ್ ಲೂಯಿಸ್ ನಿಯಮದನ್ವಯ 9 ವಿಕೆಟ್ ಗಳಿಂದ ಸೋಲಿಸಿದ ಯಶ್ ಧುಲ್ ನೇತೃತ್ವದ ಭಾರತ ತಂಡ 2021ರ ಅಂಡರ್ 19 ಏಷ್ಯಾಕಪ್ ನಲ್ಲಿ ಚಾಂಪಿಯನ್ ಎನಿಸಿಕೊಂಡಿತು. ಆ ಮೂಲಕ ಜನವರಿಯಲ್ಲಿ ವೆಸ್ಟ್ ಇಂಡೀಸ್ ನಲ್ಲಿ ನಡೆಯಲಿರುವ ಅಂಡರ್ 19 ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ತಂಡ ಭರ್ಜರಿಯಾಗಿ ಅಭ್ಯಾಸ ನಡೆಸಿದೆ.
ಪಂದ್ಯಕ್ಕೆ ಹಲವು ಬಾರಿ ಮಳೆ ಅಡ್ಡಿಪಡಿಸಿದ್ದರಿಂದ ತಲಾ 38 ಓವರ್ ಗಳಿಗೆ ಪಂದ್ಯವನ್ನು ನಿಗದಿ ಮಾಡಲಾಗಿತ್ತು. ನಿಧಾನಗತಿಯಲ್ಲಿ ಬ್ಯಾಟಿಂಗ್ ಮಾಡಿದ ದ್ವೀಪರಾಷ್ಟ್ರ ಶ್ರೀಲಂಕಾ ತಂಡ 38 ಓವರ್ ಗಳಲ್ಲಿ 9 ವಿಕೆಟ್ ಗೆ 106 ರನ್ ಗಳಿಸಿದ್ದ ವೇಳೆ ಅವರ ಇನ್ನಿಂಗ್ಸ್ ಅನ್ನು ಕೊನೆ ಮಾಡಲಾಗಿತ್ತು. ಇದರಿಂದಾಗಿ ಡಿಎಲ್ ನಿಯಮದನ್ವಯ 38 ಓವರ್ ಗಳಲ್ಲಿ 102 ರನ್ ಗಳನ್ನು ಬಾರಿಸುವ ಪರಿಷ್ಕೃತ ಸವಾಲು ಪಡೆದಿದ್ದ ಭಾರತ ತಂಡ 21.3 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 104 ರನ್ ಬಾರಿಸಿ ಗೆಲುವು ಕಂಡಿತು.

ತಂಡದ ಗೆಲುವಿನಲ್ಲಿ ಮಿಂಚಿದ ಅಂಗ್ ಕ್ರಿಷ್ ರಘುವಂಶಿ ಅದ್ಭುತ ಅರ್ಧಶತಕ ಬಾರಿಸುವ ಮೂಲಕ ಸುಲಭ ಗೆಲುವಿಗೆ ಕಾರಣರಾದರು. ಆರಂಭಿಕ ಹರ್ನೂರ್ ಸಿಂಗ್ (5) ವಿಕೆಟ್ ಅನ್ನು 5ನೇ ಓವರ್ ನಲ್ಲಿಯೇ ಕಳೆದುಕೊಂಡಿದ್ದ ಭಾರತ ತಂಡಕ್ಕೆ 2ನೇ ವಿಕೆಟ್ ಗೆ ರಘುವಂಶಿ ಹಾಗೂ ಸೆಮಿಫೈನಲ್ ಪಂದ್ಯದ ಗೆಲುವಿನ ಹೀರೋ ಶೇಖ್ ರಶೀದ್ ಮುರಯದ 96 ರನ್ ಗಳ ಜೊತೆಯಾಟವಾಡಿ ತಂಡವನ್ನು ಚಾಂಪಿಯನ್ ಪಟ್ಟವೇರಿದರು. 67 ಎಸೆತಗಳನ್ನು ಎದುರಿಸಿದ ಅಂಗ್ ಕ್ರಿಷ್ ರಘುವಂಶಿ 7 ಬೌಂಡರಿಯೊಂದಿಗೆ 56 ರನ್ ಬಾರಿಸಿದರೆ, ಶೇಖ್ ರಶೀದ್ 49 ಎಸೆತಗಳಲ್ಲಿ 2 ಬೌಂಡರಿಯೊಂದಿಗೆ 31 ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
