ಅಭಿನಯದಲ್ಲಿ ಜಾಣೆ, ನೃತ್ಯದಲ್ಲಿಯೂ ಪ್ರವೀಣೆ ಎನಿಸಿಕೊಂಡಿರುವ ಕನ್ನಡದ ಕಿಸ್ ಕ್ಯೂಟಿ ಶ್ರೀಲೀಲಾ ಈಗ ಅಕ್ಕ-ಪಕ್ಕದ ಇಂಡಸ್ಟ್ರೀಯಲ್ಲಿ ನಂಬರ್ 1 ನಟಿಯಾಗುವತ್ತ ಹೆಜ್ಜೆ ಇಡುತ್ತಿದ್ದಾರೆ. ತೆಲುಗು ಅಂಗಳದಲ್ಲಿ ಕಿಸಿಕ್ ಅಂತಾ ಕುಣಿದು ಕಿಕ್ಕೇರಿಸಿ ಈಗ ಬಾಲಿವುಡ್ ನತ್ತ ಮುಖ ಮಾಡಿದ್ದಾರೆ. ಮಹೇಶ್ ಬಾಬು, ಬಾಲಯ್ಯ, ಅಲ್ಲು ಅರ್ಜುನ್ ನಂತಹ ಸ್ಟಾರ್ ಹೀರೋಗಳ ಜೊತೆ ಶೈನ್ ಆಗಿರುವ ಭರಾಟೆ ಬ್ಯೂಟಿಯ ಅಭಿನಯಕ್ಕಿಂತ ಜನ ಮೆಚ್ಚಿದ್ದು ಆಕೆಯ ನೃತ್ಯವನ್ನೇ..ಶ್ರೀಲೀಲಾ ಡ್ಯಾನ್ಸಿಂಗ್ ನಲ್ಲಿಯೇ ಮೋಡಿ ಮಾಡಿದಾಕೆ. ಅದರಲ್ಲಿಯೂ ಅಲ್ಲು ಅರ್ಜುನ್ ಜೊತೆ ಕುಣಿದ ಕಿಸಿಕ್ ಹಾಡು, ಮಹೇಶ್ ಬಾಬು ಜೊತೆ ಹೆಜ್ಜೆ ಹಾಕಿದ ಕುರ್ಚಿ ಮದಥಪೆಟ್ಟಿ ಸಿಂಗಿಂಗ್ ಎಲ್ಲೆಡೆ ಸೆನ್ಸೇಷನ್ ಸೃಷ್ಟಿಸಿದ್ದವು. ಹೀಗಾಗಿ ಡ್ಯಾನ್ಸ್ ಎಂದರೆ ಶ್ರೀಲೀಲಾ, ಶ್ರೀಲೀಲಾ ಅಂದ್ರೆ ಡ್ಯಾನ್ಸ್ ಎನ್ನುವ ಹಾಗೇ ಆಗಿದೆ. ಹೀಗಾಗಿ ಡಾಕ್ಟರಮ್ಮನಿಗೆ ಬೆಸ್ಟ್ ಡ್ಯಾನ್ಸರ್ ಎಂಬ ಲೆಬಲ್ ಬಿದ್ದಿದೆ. ಇದು ಶ್ರೀಲೀಲಾಗೆ ಸ್ವಲ್ಪವೂ ಇಷ್ಟವಿಲ್ಲ. ಡ್ಯಾನ್ಸರ್ ಶ್ರೀಲೀಲಾ ಎಂದರೆ ಕಡುಕೋಪ ಬರುತ್ತದೆ ಎಂಬುದಕ್ಕೆ ಇತ್ತೀಚೆಗೆ ನಡೆದ ಘಟನೆಯೇ ಸಾಕ್ಷಿ.
ನಿತಿನ್ ನಾಯಕನಾಗಿ, ಶ್ರೀಲೀಲಾ ನಾಯಕಿಯಾಗಿ ಅಭಿನಯಿಸಿರುವ ತೆಲುಗು ಸಿನಿಮಾ ‘ರಾಬಿನ್ ಹುಡ್’ ಹೆ ಪ್ರೀ ರಿಲೀಸ್ ಇವೆಂಟ್ ಕಾರ್ಯಕ್ರಮ ಹೈದ್ರಾಬಾದ್ ನಲ್ಲಿ ಇತ್ತೀಚೆಗೆ ನಡೆದಿದೆ. ಈ ವೇಳೆ ಕಾರ್ಯಕ್ರಮದ ನಿರೂಪಕಿ, ಶ್ರೀಲೀಲಾ ಅವರನ್ನು ಪರಿಚಯಿಸುವಾಗ ‘ಶ್ರೀಲೀಲಾ ಎಂದರೆ ಹಾಡುಗಳು, ಹಾಡುಗಳು ಎಂದರೆ ಡ್ಯಾನ್ಸ್, ಡ್ಯಾನ್ಸ್ ಎಂದರೆ ಶ್ರೀಲೀಲಾ’ ಎಂದು ಕೊಂಡಾಡಿದರು. ಆದರೆ ನಿರೂಪಕಿ ತನ್ನನ್ನು ಕೇವಲ ಡ್ಯಾನ್ಸರ್ ಆಗಿ ಮಾತ್ರವೇ ಗುರುತಿಸಿದ್ದು ಶ್ರೀಲೀಲಾಗೆ ಕೋಪ ತರಿಸಿದಂತೆ ಕಂಡಿದೆ.
ನಿರೂಪಕಿ ತಮ್ಮನ್ನು ಡ್ಯಾನ್ಸರ್ ಎಂದು ಬಿಂಬಿಸಿದಂತೆ ಶ್ರೀಲೀಲಾಗೆ ಅನಿಸಿದೆ. ಹೀಗಾಗಿ ತಮ್ಮ ಮಾತನಾಡುವ ಸರದಿ ಬಂದಾಗ ತನ್ನನ್ನು ಡ್ಯಾನ್ಸರ್ ಎಂದ ನಿರೂಪಕಿಗೆ ಪರೋಕ್ಷವಾಗಿ ಶ್ರೀಲೀಲಾ ಉತ್ತರಿಸಿದ್ದಾರೆ. ‘ಈ ಸಿನಿಮಾದಲ್ಲಿ ನನ್ನ ಬಗ್ಗೆ ಅಭಿಪ್ರಾಯವೇ ಬದಲಾಗುವಂತೆ ನಟಿಸಿದ್ದೇನೆ, ಈ ಸಿನಿಮಾ ಬಿಡುಗಡೆ ಆದ ಮೇಲೆ, ‘ಶ್ರೀಲೀಲಾ ಎಂದರೆ ಡೈಲಾಗ್, ಡೈಲಾಗ್ ಎಂದರೆ ನಟನೆ, ನಟನೆ ಎಂದರೆ ಶ್ರೀಲೀಲಾ’ ಎನ್ನುವಂತೆ ಮಾಡುತ್ತೇನೆ’ ಎಂದಿದ್ದಾರೆ.
ಸದ್ಯ ಶ್ರೀಲೀಲಾ ಎರಡು ಬಾಲಿವುಡ್ ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಕಾರ್ತಿಕ್ ಆರ್ಯನ್ ನಾಯಕನಾಗಿ ಅಭಿನಯಿಸುತ್ತಿರುವ ಆಶಿಖಿ 3’ ಸಿನಿಮಾದ ನಾಯಕಿಯಾಗಿ ಶ್ರೀಲೀಲಾ ನಟಿಸುತ್ತಿದ್ದಾರೆ. ಈ ಚಿತ್ರದ ಜೊತೆಗೆ ಸೈಫ್ ಅಲಿ ಖಾನ್ ಮಗ ಇಬ್ರಾಹಿಂ ಅಲಿ ಖಾನ್ ಅಭಿನಯದ ಚೊಚ್ಚಲ ಚಿತ್ರಕ್ಕೂ ಕಿಸ್ ಕ್ಯೂಟಿಯೇ ಹೀರೋಯಿನ್. ತಮಿಳಿನ ಪರಾಶಕ್ತಿ ಚಿತ್ರದಲ್ಲಿ ಶಿವಕಾರ್ತಿಕೇಯನ್ ಗೆ ಜೋಡಿಯಾಗಿ ಲೀಲಾ ಸಾಥ್ ಕೊಡುತ್ತಿದ್ದಾರೆ.