ಲಕ್ನೋ:- ಸನಾತನ ಧರ್ಮ, ಕುಂಭಮೇಳದ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸೋದು ಸಹಿಸಲ್ಲ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಪ್ರಯಾಗ್ರಾಜ್ನ ತ್ರಿವೇಣಿ ಸಂಗಮದ ನೀರಲ್ಲಿ ಹಾನಿಕಾರಕ ಬ್ಯಾಕ್ಟೀರಿಯಾಗಳಿವೆ.. ಇದು ಸ್ನಾನ ಮಾಡಲು ಯೋಗ್ಯವಲ್ಲ ಎಂಬ ಮಾಲಿನ್ಯ ನಿಯಂತ್ರಣ ಮಂಡಳಿ ವರದಿಯನ್ನು ಯುಪಿ ಸರ್ಕಾರ ಅಲ್ಲಗಳೆದಿದೆ.
ಈ ಬಗ್ಗೆ ಮಾತನಾಡಿದ ಯೋಗಿ ಆದಿತ್ಯನಾಥ್, ಈಗಾಗಲೇ ಕುಂಭಮೇಳದಲ್ಲಿ 56 ಕೋಟಿ ಭಕ್ತರು ಮಿಂದೆದಿದ್ದಾರೆ. ಯಾರಿಗೂ ಏನು ಆಗಿಲ್ಲ. ನಾವು ಇಂತಹ ಆಧಾರರಹಿತ ಆರೋಪ ಒಪ್ಪಲ್ಲ. ಸನಾತನ ಧರ್ಮದ ಬಗ್ಗೆ, ಕುಂಭಮೇಳದ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸೋದನ್ನು ಸಹಿಸಲ್ಲ. ಅವರು 56 ಕೋಟಿ ಭಕ್ತರ ನಂಬಿಕೆಗಳ ಜೊತೆ ಆಟ ಆಡ್ತಿದ್ದಾರೆ ಎಂದು ಅಸೆಂಬ್ಲಿಯಲ್ಲಿ ಸಿಎಂ ಗುಡುಗಿದ್ದಾರೆ.
ಕಾಲ್ತುಳಿತದಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಿದ್ರು. ಈ ವಿಚಾರದಲ್ಲೂ ರಾಜಕೀಯ ಮಾಡಿದ ವಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡ್ರು. ಸನಾತನ ಧರ್ಮಕ್ಕೆ ಸಂಬಂಧಿಸಿದ ಕಾರ್ಯಕ್ರಮ ಆಯೋಜಿಸಿರೋದು ಇವರ ಪಾಲಿಗೆ ಅಪರಾಧವಾಗಿದೆ. ರೋಗಗ್ರಸ್ಥ ದೇಹವನ್ನು ಸರಿ ಮಾಡಬಹುದು. ರೋಗಗ್ರಸ್ಥ ಮನಸ್ಸುಗಳನ್ನು ಸರಿ ಮಾಡಲು ಸಾಧ್ಯವಿಲ್ಲ ಎಂದು ವಿಪಕ್ಷಗಳನ್ನು ಕುಟುಕಿದರು.