ಕೋಲಾರ:- ಸಮಾಜದ ನೆಮ್ಮದಿಗಾಗಿ ಹಗಲಿರುಳು ಕೆಲಸ ಮಾಡುವ ಪೊಲೀಸರು ದೈಹಿಕ ಮತ್ತು ಮಾನಸಿಕ ಸದೃಢತೆ ಕಾಯ್ದುಕೊಳ್ಳುವುದು ಅವಶ್ಯವಾಗಿದೆ ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ ಅವರು ಹೇಳಿದರು.
ನಗರದ ಡಿಎಆರ್ ಕವಾಯತು ಮೈದಾನದಲ್ಲಿ ಆಯೋಜಿಸಿರುವ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ಇಂದು ಗಾಳಿ ಬುರುಡೆ ಹಾಗೂ ಪಾರಿವಾಳ ಹಾರಿಬಿಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. ಬಿಡುವಿಲ್ಲದ ಕಚೇರಿ ಕೆಲಸ ಕಾರ್ಯಗಳಿಂದ ಹಾಗೂ ಒತ್ತಡದಿಂದಾಗಿ ನಾವುಗಳು ದೈಹಿಕ ಹಾಗೂ ಮಾನಸಿಕ ಆರೋಗ್ಯದ ಕಡೆಗೆ ಗಮನ ನೀಡುತ್ತಿಲ್ಲ. ಇದರಿಂದ ನಮ್ಮ ಆರೋಗ್ಯದಲ್ಲಿ ಏರುಪೇರುಗಳು ಉಂಟಾಗುತ್ತಿವೆ. ಬಿಡುವಿನ ವೇಳೆಯಲ್ಲಿ ನಾವೆಲ್ಲರೂ ಆದಷ್ಟು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಅದರಲ್ಲೂ ಪೊಲೀಸ್ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ಸದಾ ಒತ್ತಡದಲ್ಲಿ ಕಾರ್ಯ ನಿರ್ವಹಿಸಬೇಕಾಗಿರುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಗೆ ಕ್ರೀಡಾ ಚಟುವಟಿಕೆ ಸಹಕಾರಿಯಾಗಿದೆ. ಈ ಕ್ರೀಡಾಕೂಟದಲ್ಲಿ ಅತ್ಯಂತ ಉತ್ಸಾಹ ಹಾಗೂ ಸಂತೋಷದಿಂದ ಭಾಗವಹಿಸಿ ಎಂದು ಶುಭ ಕೋರಿದರು. ಅವರು ಕ್ರೀಡಾಪಟುಗಳಿಗೆ ಕ್ರೀಡಾ ಪ್ರತಿಜ್ಞಾವಿಧಿ ಬೋಧಿಸಿದರು.
ಗಮನ ಸೆಳೆದ ಪಥಸಂಚಲನ:-
ಪೊಲೀಸ್ ಕ್ರೀಡಾಕೂಟದಲ್ಲಿ ಭಾಗವಹಿಸಿದ 5 ಕ್ರೀಡಾ ತಂಡಗಳು ಶಿಸ್ತುಬದ್ಧ ಪಥ ಸಂಚಲನ ನಡೆಸಿದರು. ಪೊಲೀಸ್ ಕ್ರೀಡಾಕೂಟದಲ್ಲಿ ಭಾಗವಹಿಸಿದ ಕೋಲಾರ ನಗರ ವೃತ್ತ, ಕೋಲಾರ ಗ್ರಾಮಾಂತರ ವೃತ್ತ ಮುಳಬಾಗಿಲು ಉಪವಿಭಾಗಗಳ ತಂಡ ಹಾಗೂ ಮಹಿಳಾ ಪೊಲೀಸ್ ಕ್ರೀಡಾ ತಂಡಗಳು ಗುಲಾಬಿ, ಕೇಸರಿ, ನೀಲಿ ಹಾಗೂ ಇತರ ಬಣ್ಣದ ಟಿ-ಶರ್ಟ್ ಧರಿಸಿ ಶಿಸ್ತುಬದ್ಧ ಪಥ ಸಂಚಲನ ನಡೆಸಿದರು. ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಸೆನ್ , ಕೋಲಾರ ನಗರ ವೃತ್ತದ ಅರುಣ್ ಗೌಡ ಪಾಟೀಲ್, ಗ್ರಾಮಾಂತರ ವೃತ್ತದ ಹೇಮಂತ್ ಕುಮಾರ್ ಮುಳಬಾಗಿಲು ಪೊಲೀಸ್ ಉಪ ವಿಭಾಗದ ಅರ್ಜುನ್ ಗೌಡ , ಮಹಿಳಾ ಪೊಲೀಸ್ ತಂಡದ ಕು. ಮಮತಾ , ನೇತೃತ್ವದಲ್ಲಿ ನಡೆದ ಪಥಸಂಚಲನ ಎಲ್ಲರ ಗಮನ ಸೆಳೆಯಿತು.
ಕ್ರೀಡಾಜ್ಯೋತಿ ಕ್ರೀಡಾಕೂಟದ ಅಂಗವಾಗಿ ಕ್ರೀಡಾ ಜ್ಯೋತಿಯನ್ನು ಜಿಲ್ಲಾಧಿಕಾರಿ ಅಕ್ರಂ ಪಾಷ ಅವರು ಬೆಳಗಿಸಿದರು. ಸಮಾರಂಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಪದ್ಮ ಬಸವಂತಪ್ಪ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎಂ ನಾರಾಯಣ, ಹೆಚ್ಚು ವರಿ ಪೊಲೀಸ್ ವರಿಷ್ಟಾಧಿಕಾರಿ ಭಾಸ್ಕರ್ ಸೇರಿದಂತೆ ಪೊಲೀಸ್ ಇಲಾಖೆಯ ವರಿಷ್ಠರು ಕ್ರೀಡಾಸಕ್ತರು ಉಪಸ್ಥಿತರಿದ್ದರು.