ಗದಗ: ಮಹಾ ಮಾನವತವಾದಿ ಸಮಾನತೆ ಹರಿಕಾರ, ಜ್ಞಾನದ ಮೇರು ಪರ್ವತ, ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ರವರ ಜೀವನ ನಮಗೆಲ್ಲ ಆದರ್ಶ, ಸಾಧನೆಗೆ ಮತ್ತೊಂದು ಹೆಸರೇ ಡಾ. ಬಿ ಆರ್ ಅಂಬೇಡ್ಕರ್ ಇಂತಹ ಸಾಧಕರ ಜೀವನದ ಆದರ್ಶಗಳನ್ನು ಮೈಗೂಡಿಸಿಕೊಂಡು ಕಠಿಣ ಪರಿಶ್ರಮದಿಂದ ಗೆಲುವಿನ ಮೆಟ್ಟಿಲು ಮುಟ್ಟಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಉದಯಕುಮಾರ ಯಲಿವಾಳ ಹೇಳಿದರು.
ಅವರು ಗದಗ ಜಿಲ್ಲೆಯ ಮುಂಡರಗಿಯ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಡಾ. ಬಿ ಆರ್ ಅಂಬೇಡ್ಕರ್ ರವರ 133 ನೇ ಜಯಂತಿ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಿ ಡಾ. ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯಲ್ಲಿನ ವಸತಿ ನಿಲಯಗಳ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ್ದಕ್ಕೆ ಅಭಿನಂದಿಸಿದ್ರು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಸಮಾಜ ಕಲ್ಯಾಣ ಇಲಾಖೆಯ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಉನ್ನತ ಅಂಕ ಗಳಿಸಬೇಕು ಎನ್ನುವ ಕನಸನ್ನು ನನಸು ಮಾಡಿದ ಇಲಾಖೆಯ ಸರಕಾರಿ ಮೆಟ್ರಿಕ್ ನಂತರ ಬಾಲಕರ ವಸತಿ ನಿಲಯ ಮುಂಡರಗಿ ನಿಲಯದ ವಿದ್ಯಾರ್ಥಿ ಮಹೇಶ ನಾಯಕ್, ದ್ವಿತೀಯ ಪಿಯುಸಿ ಕಲಾವಿಭಾಗದಲ್ಲಿ 600 ಅಂಕಗಳಿಗೆ 586 ಅಂಕ ಪಡೆದು 97.66% ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿ ಗದಗ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದು ಸಮಾಜ ಕಲ್ಯಾಣ ಇಲಾಖೆಗೆ ಕೀರ್ತಿ ತಂದಿರುತ್ತಾನೆ. ವಿದ್ಯಾರ್ಥಿಯ ಮನೆಯಲ್ಲಿ ಕಡು ಬಡತನ ವಿದ್ದರೂ ಸಮಾಜ ಕಲ್ಯಾಣ ಇಲಾಖೆಯ ಉತ್ತಮ ಶೈಕ್ಷಣಿಕ ಸೌಲಭ್ಯಗಳ ಸದುಪಯೋಗ, ಸತತ ಪರಿಶ್ರಮ ಶ್ರದ್ಧೆ ಇದ್ದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂದು ತಿಳಿಸಿದರು. ಹಾಗೆಯೇ ಮುಂದಿನ ಶೈಕ್ಷಣಿಕ ಬದುಕಿಗೆ ಸಮಾಜ ಕಲ್ಯಾಣ ಇಲಾಖೆಯ ಸಾಕಷ್ಟು ಪ್ರೋತ್ಸಾಹದಾಯಕ ಯೋಜನೆಗಳು ಇವೆ ಐಎಎಸ್ ಕೆಎಎಸ್ ಇಂತಹ ಉನ್ನತ ಹುದ್ದೆ ಪಡೆಯಲು ಇಲಾಖೆಯಿಂದ ತರಬೇತಿ ಕಾರ್ಯಕ್ರಮಗಳು ಕಾರ್ಯಾಗಾರಗಳು ಇವೆ ಇವೆಲ್ಲವನ್ನೂ ಉಪಯೋಗಿಸಿಕೊಂಡು ಉನ್ನತ ಹುದ್ದೆ ಉನ್ನತ ವ್ಯಕ್ತಿತ್ವ ಪಡೆದು ಇಲಾಖೆಯ ಕೀರ್ತಿ ಗೌರವ ಹೆಚ್ಚಿಸಿ ಎಂದು ಕಿವಿ ಮಾತು ಹೇಳಿದರು.
ಹಾಗೆಯೇ ಸಂದೀಪ ವಕೀಲಪ್ಪ ಪೂಜಾರ್ ಕಲಾವಿಭಾಗದಲ್ಲಿ 567 ಅಂಕ ಪಡೆದು 94.5 0 % ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿರುತ್ತಾನೆ.
ಸರಕಾರಿ ಮೆಟ್ರಿಕ್ ನಂತರ ಪರಿಶಿಷ್ಟ ಪಂಗಡ ಬಾಲಕರ ವಸತಿ ನಿಲಯ ಮುಂಡರಗಿ ನಿಲಯದ ವಿದ್ಯಾರ್ಥಿ ಬಸವರಾಜ ಹೆಬ್ಬಾಳ ಕೂಡ 567 ಅಂಕ ಪಡೆದು 94.5 0 ಪ್ರತಿಶತ ಸಾಧಿಸಿ ಶ್ರೀ ಜಗದ್ಗುರು ಅನ್ನದಾನೇಶ್ವರ ಪಿಯು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿರುತ್ತಾನೆ. ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಅಭಿನಂದಿಸಿ ಮುಂದಿನ ಶೈಕ್ಷಣಿಕ ಬದುಕು ಭವ್ಯವಾಗಿರಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಕಚೇರಿ ಅಧಿಕಾರಿಗಳಾದ ಅರುಣಾ ಸೊರಗಾವಿ, ಶಾಂತಲಾ ಮೆಟ್ಟಿನ್, ಲಕ್ಷ್ಮಣ ಗಚ್ಚಿಮನಿ, ಕುಬೇರ ಲಮಾಣಿ, ಬಾಬು ನದಾಫ್, ಸುನಿಲ ಸೇರಿದಂತೆ ವಿದ್ಯಾರ್ಥಿಗಳ ಪೋಷಕರು, ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.