ಬೆಂಗಳೂರು: ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಒಪ್ಪಂದ ಮಾಡಿಕೊಂಡಿರುವ ಬೃಹತ್ ಕೈಗಾರಿಕೆಗಳಿಗೆ ಬೇಕಾದ ಬಿಡಿ ಭಾಗಗಳ ಪೂರೈಕೆಯ ಅಗತ್ಯವನ್ನು ಮನಗೊಂಡಿರುವ ರಾಜ್ಯ ಸರ್ಕಾರ ,ಇದಕ್ಕೆ ಪೂರಕವಾಗಿ ಬೃಹತ್ ಮತ್ತು ಸಣ್ಣ ಕೈಗಾರಿಕೋದ್ಯಮಿಗಳನ್ನು ಒಂದೆಡೆ ಸೇರಿಸಿ ಬರುವ ಜನವರಿಯಲ್ಲಿ ಸಮಾವೇಶ ನಡೆಸಲು ನಿರ್ಧರಿಸಿದೆ.
ವಿಧಾನ ಸೌಧದಲ್ಲಿ ಸಣ್ಣ ಕೈಗಾರಿಕೆ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿದ ಪೌರಾಡಳಿತ, ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಎಂಟಿಬಿ ನಾಗರಾಜು, ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ರಾಜ್ಯದಲ್ಲಿ 9.81 ಲಕ್ಷ ಕೋಟಿ ರೂಪಾಯಿ ಬಂಡವಾಳ ಹೂಡಿಕೆಯ ಒಪ್ಪಂದ ಮಾಡಿಕೊಂಡಿರುವ ಬೃಹತ್ ಉದ್ದಿಮೆಗಳಿಗೆ ಭಾರೀ ಪ್ರಮಾಣದಲ್ಲಿ ಬಿಡಿ ಭಾಗಗಳ ಅಗತ್ಯ ಬೀಳಲಿದೆ.ಅದಕ್ಕಾಗಿ ಮತ್ತಷ್ಟು ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆಗಳ ಸ್ಥಾಪನೆ ಆಗಬೇಕಿದೆ ಎಂದು ಅಭಿಪ್ರಾಯ ಪಟ್ಟರು.
ಈ ಹಿನ್ನೆಲೆಯಲ್ಲಿ ಜನವರಿ ಮೊದಲ ವಾರದಲ್ಲಿ ಬೆಂಗಳೂರಿನಲ್ಲಿ ಬೃಹತ್ ಮತ್ತು ಸಣ್ಣ ಉದ್ದಿಮೆದಾರರನ್ನು ಒಂದೆಡೆ ಸೇರಿಸಿ ಸಮಾವೇಶ ನಡೆಸಲಾಗುವುದು ಎಂದು ತಿಳಿಸಿದರು.

ನೆಲಮಂಗಲ ಕೈಗಾರಿಕಾ ವಸಾಹತುವಿಗೆ ನಾಲ್ಕು ಪಥದ ರಸ್ತೆ ನಿರ್ಮಾಣ,ವಿದ್ಯುತ್ ಸಬ್ ಸ್ಟೇಷನ್ ಹಾಗೂ ತ್ಯಾಜ್ಯ ಸಂಸ್ಕರಣಾ ಘಟಕ ಆರಂಭಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸಚಿವ ಎಂಟಿಬಿ ನಾಗರಾಜು ಇದೇ ಸಂದರ್ಭದಲ್ಲಿ ಸೂಚನೆ ನೀಡಿದರು. ಸಭೆಯಲ್ಲಿ ಕೈಗಾರಿಕಾ ಇಲಾಖೆ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ,ಕೆಎಸ್ಎಸ್ಐಡಿಸಿ ವ್ಯವಸ್ಥಾಪಕ ನಿರ್ದೇಶಕ ಎಸ್.ಜೆ.ಸೋಮಶೇಖರ್,ಕಾಸಿಯಾ ಅಧ್ಯಕ್ಷ ಕೆ.ಎನ್.ನರಸಿಂಹ ಮೂರ್ತಿ,ಪೀಣ್ಯ ಕೈಗಾರಿಕಾ ಸಂಘದ ಅಧ್ಯಕ್ಷ ಎಚ್.ಮಂಜುನಾಥ್ ಹಾಗೂ ಕೈಗಾರಿಕೆ, ಲೋಕೋಪಯೋಗಿ, ವಿದ್ಯುತ್, ಗೃಹ ಮಂಡಳಿ,ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.
ವರದಿ:- ಬಾಳು ತೇರದಾಳ
