ವಿಶ್ವಕಪ್ ಫೈನಲ್ ಪಂದ್ಯ ವೀಕ್ಷಿಸಲು ಇಡೀ ಭಾರತ ಕಾತುರದಿಂದ ಕಾಯುತ್ತಿರುವಂತೆ ಬೆಂಗಳೂರು ಉತ್ಸಾಹದಿಂದ ಪುಟಿಯುತ್ತಿದೆ.
ಬೆಂಗಳೂರಿನ ನೂರಾರು ಕ್ರಿಕೆಟ್ ಆಸಕ್ತರು ಅಹಮದಾಬಾದ್ಗೆ ತೆರಳುತ್ತಿದ್ದಾರೆ. ದುಬಾರಿ ಕ್ರಿಕೆಟ್ ಪಂದ್ಯಾವಳಿಗೆ 35 ಸಾವಿರದಿಂದ 1 ಲಕ್ಷ ರೂವರಗೆ ಹಣ ತೆತ್ತು ಟಿಕೆಟ್ ಖರೀದಿ ಮಾಡಿದ್ದಾರೆ. ವಿಮಾನದಲ್ಲಿ ಬೆಂಗಳೂರಿನಿಂದ ಅಹಮದಾಬಾದ್ಗೆ ಹೋಗಿ ಬರಲು ರೂ. 70-90 ಸಾವಿರ ನೀಡಿ ಟಿಕೆಟ್ ಬುಕ್ ಮಾಡಿದ್ದಾರೆ. ಅಲ್ಲಿ ಉಳಿದುಕೊಳ್ಳಲು ಹೋಟೆಲ್ ರೂಂಗಳ ಬೆಲೆ ಹತ್ತು ಪಟ್ಟು ಹೆಚ್ಚಾಗಿದೆ. ಸಣ್ಣ ಸಣ್ಣ.ಹೋಟೆಲ್ ಗಳಲ್ಲಿ ಒಂದು ರೂಂಗೆ 10-20 ಸಾವಿರ ನಿಗದಿಯಾಗಿದೆ. ತಾರಾ ಹೋಟೆಲ್ಗಳಲ್ಲಿ 35 ಸಾವಿರದಿಂದ 1.50 ಲಕ್ಷ ರೂಗಳವರೆಗೆ ಬೇಡಿಕೆ ಇದೆ.
ಇದು ಅಲ್ಲಿಗೆ ಹೋಗುವ ಸ್ಥಿತಿವಂತ ಕ್ರಿಕೆಟ್ ಅಭಿಮಾನಿಗಳ ಕತೆಯಾದರೆ ಬೆಂಗಳೂರಿನಲ್ಲೇ ಪಂದ್ಯ ವೀಕ್ಷಿಸುವವರ ಉತ್ಸಾಹಕ್ಕೇನೂ ಭಂಗ ಬಂದಿಲ್ಲ. ಅನೇಕ, ಹೋಟೆಲ್, ಕ್ಲಬ್, ಬಾರ್ ಮತ್ತು ರೆಸ್ಟೋರೆಂಟ್, ಪಬ್ ಗಳಲ್ಲಿ ದೊಡ್ಡ ದೊಡ್ಡ ಪರದೆಗಳ ಮೂಲಕ ಪಂದ್ಯ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ. ಈ ಪಬ್ಗಳ ಮಾಲೀಕರ ಪ್ರಕಾರ ಅತಿ ಹೆಚ್ಚು ಕ್ರಿಕೆಟ್ ಪ್ರೇಮಿಗಳು ಸೇರುತ್ತಾರೆ ಎಂದು ಊಹಿಸಿದ್ದಾರೆ.
ಮೂರು ದಿನಗಳಿಂದ ಬಾರ್, ಪಬ್, ಕ್ಲಬ್ ಗಳಲ್ಲಿ ರಿಸರ್ವೇಶನ್ಗೆ ಬೇಡಿಕೆ ಆರಂಭವಾಗಿದೆ. ಈ ಪಂದ್ಯ ವೀಕ್ಷಿಸಲು ಆಗಮಿಸುವ ಕ್ರಿಕೆಟ್ ಪ್ರೇಮಿಗಳಿಗಾಗಿ ವಿಶೇಷ ಖಾದ್ಯಗಳನ್ನು ಸಿದ್ದಪಡಿಸುತ್ತಿದ್ದೆವೆ ಎಂದು ಹಲವಾರು ಪಬ್ ಮತ್ತು ಕ್ಲಬ್ ಗಳ ವ್ಯವಸ್ಥಾಪಕರು ಹೇಳುತ್ತಾರೆ. ಕೆಲವು ಕಡೆ ಕ್ರಿಕೆಟ್ ಕುರಿತ ರಸಪ್ರಶ್ನೆ ಕಾರ್ಯಕ್ರಮವನ್ನೂ ಸಂಘಟಿಸಿದ್ದು ಉತ್ತರ ನೀಡಿದವರಿಗೆ ಬಹುಮಾನ ನೀಡಲು ಸಿದ್ದತೆಗಳನ್ನು ಮಾಡಿಕೊಂಡಿದ್ದಾರೆ.
ಸಾಮಾನ್ಯವಾಗಿ ಭಾನುವಾರ ಎಲ್ಲಾ ಪಬ್ ಮತ್ತು ಕ್ಲಬ್ ಗಳು ಹೌಸ್ ಫುಲ್ ಆಗಿರುತ್ತವೆ. ನಾಳೆಯ ಭಾನುವಾರ ವಿಶೇಷವಾಗಿದ್ದು ಹೆಚ್ಚುವರಿಯಾಗಿ ಗರಿಷ್ಠ ಪ್ರಮಾಣದಲ್ಲಿ ಆಸನಗಳ ವ್ಯವಸ್ಥೆ ಮಾಡುತ್ತಿದ್ದೇವೆ ಎಂದು ಹೋಟೆಲ್ಗಳ ವ್ಯವಸ್ಥಾಪಕರು ಹೇಳುತ್ತಾರೆ. ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೆಲವು ಹೋಟೆಲ್ ಗಳಲ್ಲಿ ಎರಡೆರಡು ಸ್ಕ್ರೀನ್ ಗಳನ್ನು ಅಳವಡಿಸಿರುವುದಾಗಿ ತಿಳಿದು ಬಂದಿದೆ.
ಗ್ರಾಹಕರನ್ನು ಆಕರ್ಷಿಸಲು ಹೋಟೆಲ್ ಪಬ್ ಗಳು ಅನೇಕ ತಂತ್ರಗಳ ಮೊರೆ ಹೋಗಿವೆ. ಮುಖದ.ಮೇಲೆ ಭಾರತದ ಬಾವುಟದ ಚಿತ್ರ ಬಿಡಿಸುವುದು, ನೆಚ್ಚಿನ ಆಟಗಾರರ ಟೀ ಷರ್ಟ್ ನೀಡುವುದು, ರಿಟರ್ನ್ ಗಿಫ್ಟ್, ಕ್ವಿಜ್ ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ. ಕೇವಲ ಹೋಟೆಲ್ ಪಬ್ ಮತ್ತು ಕ್ಲಬ್ ಗಳಿಗೆ ಮನರಂಜನೆ ಸೀಮಿತವಾಗಿಲ್ಲ. ಅನೇಕ ಅಪಾರ್ಟ್್ಮೆಂಟ್ ಗಳೂ ವಿಶೇಷ ವ್ಯವಸ್ಥೆ ಮಾಡಿವೆ.