ಬಳ್ಳಾರಿ,ನ.30: ಭಕ್ತ ಕನಕದಾಸರ ತಾತ್ವಿಕತೆಯ ಚಿಂತನೆ, ಸಂಗೊಳ್ಳಿ ರಾಯಣ್ಣನ ಧೈರ್ಯ ಹಾಗೂ ಇದೇ ಸಮುದಾಯದ ಮುಖ್ಯಮಂತ್ರಿ ಸಿದ್ದರಾಮಯ್ಯರ ಚಾಣಕ್ಯತನ ಮಾದರಿಯಾಗಿದ್ದು, ಮಹನೀಯರ ಆದರ್ಶ ನಮಗೆಲ್ಲ ಸ್ಫೂರ್ತಿಯಾಗಬೇಕು ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಡಾ.ರಾಜ್ ಕುಮಾರ್ ರಸ್ತೆಯ ರಾಘವ ಕಲಾ ಮಂದಿರದಲ್ಲಿ ಏರ್ಪಡಿಸಿದ್ದ ಸಂತ ಶ್ರೇಷ್ಠ ಕವಿ ಭಕ್ತ ಕನಕದಾಸ 536ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕನಕದಾಸರ ಆಧ್ಯಾತ್ಮಕ ವಿಷಯಗಳಿಂದ ಸಮಾಜದ ತಲ್ಲಣಕ್ಕೆ ಕಾರಣವಾಯಿತು. ಅದೇ ರೀತಿಯಾಗಿ ಸಂಗೋಳ್ಳಿ ರಾಯಣ್ಣನಂತಹ ಪರಾಕ್ರಮಿಯು ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿ ಯುದ್ಧಗಳನ್ನು ಎದುರಿಸಿದನು. ನಮ್ಮ ನಾಡಿನ ಮುಖ್ಯಮಂತ್ರಿಯವರು ಅದೇ ಸಮುದಾಯದವರಾಗಿದ್ದು, ನಾಡಿನ ಅಭಿವೃದ್ಧಿಗೆ ಒತ್ತು ನೀಡಿ, ಹಲವಾರು ಯೋಜನೆಗಳನ್ನು ರೂಪಿಸಿದ್ದಾರೆ. ಈ ಸಮುದಾಯದವರು, ಸರ್ಕಾರದ ಯೋಜನೆಗಳನ್ನು ಬಳಸಿಕೊಂಡು ಸಾಮಾಜಿಕ, ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದು ಹೇಳಿದರು.
ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಮಾತನಾಡಿ, ಕನಕದಾಸರು ಹಲವಾರು ವಚನ ಸಾಹಿತ್ಯಗಳನ್ನು ರಚಿಸಿದ್ದಾರೆ. ಕನಕದಾಸರು ಸಮಾಜದ ಒಳಿತಿಗಾಗಿ ಶ್ರಮಿಸಿದವರಾಗಿದ್ದು, ಅವರ ಜೀವನ ಮೌಲ್ಯಗಳನ್ನು, ಸಿದ್ದಾಂತಗಳನ್ನು ಅಳವಡಿಸಿಕೊಂಡರೆ ಪ್ರತಿಯೊಬ್ಬರ ಜೀವನ ಸುಗಮವಾಗುತ್ತದೆ ಎಂದು ತಿಳಿಸಿದರು.
ಕನ್ನಡ ಪ್ರಾಧ್ಯಾಪಕ ಬಿ.ಎರ್ರಿಸ್ವಾಮಿ ಅವರು ಕನಕದಾಸ ಜಯಂತಿಯ ವಿಶೇಷ ಉಪನ್ಯಾಸ ನೀಡಿ, ಕುಲ-ಕುಲ ಎಂದು ಹೊಡೆದಾಡದಿರಿ, ದೇಹ, ಆತ್ಮ, ಗಾಳಿ, ನೀರು, ಬೆಳಕು ಇವುಗಳಿಗೆ ಯಾವ ಕುಲವಿದೆ ಎಂದು ತಿಳಿಸಿಕೊಟ್ಟ ಮಹಾನ್ ಸಂತರು. 15 ಮತ್ತು 16ನೇ ಶತಮಾನದ ಜನಪ್ರಿಯ ಭಕ್ತಿಪಂಥದ ಮುಖ್ಯ ಹರಿದಾಸರಲ್ಲಿ ಕನಕದಾಸರು ಒಬ್ಬರು. ದಾಸ ಸಾಹಿತ್ಯದಲ್ಲಿ ಜೀವನ ಪಾಠವನ್ನು ಕಂಡುಕೊಂಡವರು. ಕನಕದಾಸರನ್ನು ಕರ್ನಾಟಕ ಕೀರ್ತನ ಸಾಹಿತ್ಯದಲ್ಲಿ ಆಶ್ವಿನಿ ದೇವತೆಗಳಿಗೆ ಹೋಲಿಸಲಾಗುತ್ತದೆ ಎಂದು ಕನಕದಾಸರ ಜೀವನ ಚರಿತ್ರೆ, ಕೀರ್ತನೆಗಳು, ಮಂಡನೆಗಳು ಕುರಿತು ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಉಪಮೇಯರ್ ಬಿ.ಜಾನಕಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶರಣಪ್ಪ ಸಂಕನೂರ, ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರಾ, ಪಾಲಿಕೆ ಸದಸ್ಯೆ ಈರಮ್ಮ ಸುರೇಂದ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಟಿ.ಹೊನ್ನುರಪ್ಪ, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಗಾದಿಲಿಂಗನಗೌಡ ಸೇರಿದಂತೆ ಪಾಲಿಕೆ ಸದಸ್ಯರು, ಜನಪ್ರತಿನಿಧಿಗಳು, ಮುಖಂಡರು ಹಾಗೂ ಮತ್ತಿತರು ಉಪಸ್ಥಿತರಿದ್ದರು.