ಮೈಸೂರು:- ಸೋಮಾರಿ ಸಿದ್ಧ ಎನ್ನುವುದು ವ್ಯಕ್ತಿ ನಿರ್ದಿಷ್ಟವಾದದ್ದಲ್ಲ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿಲ್ಲ. ಸಿದ್ದರಾಮಯ್ಯನವರ ಬೆಂಬಲಿಗರು ನನ್ನ ಹೇಳಿಕೆಯನ್ನು ತಿರುಚಿದ್ದಾರೆ ಎಂದರು.
ಸಿದ್ದರಾಮಯ್ಯ ಅವರ ಬೆಂಬಲಿಗರು, ಬಾಲಬಡುಕರು ನನ್ನ ಹೇಳಿಕೆಯನ್ನು ತಿರುಚಿದ್ದಾರೆ. ‘ಸೋಮಾರಿ ಸಿದ್ದ” ಎಂಬ ಮಾತು ವ್ಯಕ್ತಿ ನಿರ್ದಿಷ್ಟವಾದದ್ದಲ್ಲ. ಒಂದು ಪರಿಸ್ಥಿತಿಯನ್ನು ಸೂಚಿಸುವ ಪದ. ಸಿದ್ದರಾಮಯ್ಯನವರಿಗೆ ನಾನೆಷ್ಟು ಗೌರವ ಕೊಡುತ್ತೇನೆ ಎಂಬುದು ಅವರಿಗೆ ಗೊತ್ತಿದೆ. ಮಲ್ಲಿಕಾರ್ಜುನ ಖರ್ಗೆ ಸಹಿತವಾಗಿ ನಮ್ಮ ನಾಡಿನ ಯಾರೇ ಹಿರಿಯರು ಸಿಕ್ಕರೂ ಕೊಡಗಿನ ಸಂಸ್ಕೃತಿಗೆ ಪೂರಕವಾಗಿ ಕಾಲಿಗೆ ನಮಸ್ಕಾರ ಮಾಡುತ್ತೇನೆ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಅವರು ಯಾರನ್ನಾದರೂ ಬಹುವಚನದಲ್ಲಿ ಮಾತನಾಡಿಸಿದ ಉದಾಹರಣೆ ಇದೆಯೇ?. ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಿಸ್ಟರ್ ಮೋದಿ ಎನ್ನುತ್ತಾರೆ. ದೇವೇಗೌಡ, ಯಡಿಯೂರಪ್ಪ ಅವರಿಗೆ ಗೌರವದಿಂದ ಮಾತಾಡಿದ್ದಾರಾ?. ಕಾಂಗ್ರೆಸ್ ಸೇರುವ ಮೊದಲು ಸೋನಿಯಾ ಗಾಂಧಿ ಅವರನ್ನು ಏಕವಚನದಿಂದ ಸಂಬೋಧಿಸುತ್ತಿದ್ದರು. ಆದರೆ, ಸಿದ್ದರಾಮಯ್ಯನವರ ಬೆಂಬಲಿಗರು, ಬಾಲಬಡುಕರು ನನಗೆ ಏಕವಚನ, ಬಹುವಚನ ವ್ಯಾಕರಣ ಹೇಳಿಕೊಡಲು ಹೊರಟಿದ್ದಾರೆ ಎಂದು ಟೀಕಿಸಿದ್ದಾರೆ.
2024ರಲ್ಲಿ ನನ್ನ ವಿರುದ್ಧ ಅಭ್ಯರ್ಥಿ ಯಾರು ಎಂಬುದನ್ನು ಸಿದ್ದರಾಮಯ್ಯ ಘೋಷಿಸಿದರೆ, ನಿಗಮ-ಮಂಡಳಿ ಸ್ಥಾನಗಳಿಗೆ ಅಧ್ಯಕ್ಷರನ್ನು ನೇಮಿಸಿದರೆ ಪ್ರತಿಭಟನೆಗಳು ನಿಲ್ಲುತ್ತವೆ. ಸಿದ್ದರಾಮಯ್ಯನವರ ಮೇಲೆ ಪ್ರಭಾವ ಬೀರಲು ಅವರ ಬೆಂಬಲಿಗರು ವಿನಾಕಾರಣ ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.