ಪಣಜಿ: ಗೋವಾದಲ್ಲಿ ಮೊದಲ ಓಮಿಕ್ರಾನ್ ಪ್ರಕರಣ ಪತ್ತೆಯಾಗಿದ್ದು, ಬ್ರಿಟನ್ ನಿಂದ ವಾಪಸ್ಸಾಗಿದ್ದ 8 ವರ್ಷದ ಬಾಲಕನಿಗೆ ಓಮಿಕ್ರಾನ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಹೊಸ ವರ್ಷಾಚರಣೆಗೆ ಸಿದ್ದವಾಗುತ್ತಿದ್ದ ಗೋವಾ ಶಾಕ್ ಎದುರಾಗಿದೆ. ಡಿಸೆಂಬರ್ 17 ರಂದು ಬ್ರಿಟನ್ ನಿಂದ ವಾಪಸ್ಸಾಗಿದ್ದ 8 ವರ್ಷದ ಬಾಲಕನಿಗೆ ಓಮಿಕ್ರಾನ್ ಸೋಂಕು ತಗುಲಿರುವುದು ಪುಣೆಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಅಫ್ ವೈರಾಲಜಿ ಲ್ಯಾಬ್ ನಿಂದ ಬಂದ ವರದಿಯಲ್ಲಿ ದೃಢಪಟ್ಟಿದೆ.
ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಿದ್ದು, ಸೋಂಕು ಹರಡದಂತೆ ಕಠಿಣ ಕ್ರಮ ಜಾರಿಗೆ ತರಲಿದೆ ಎಂದು ಗೋವಾದ ಆರೋಗ್ಯ ಸಚಿವ ವಿಶ್ವಜೀತ್ ರಾಣೆ ತಿಳಿಸಿದ್ದಾರೆ. ಗೋವಾದ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಈಗಾಗಲೇ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಇರುವವರಿಗೆ ಹೊಸ ವರ್ಷಾಚರಣೆ ಸಂಭ್ರಮದಲ್ಲಿ ಕೊರೋನಾ ವೈರಸ್ ಹರಡದಂತೆ ಸೂಕ್ತ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ. ಇನ್ನು ಭಾನುವಾರ ಗೋವಾದಲ್ಲಿ 25 ಹೊಸ ಕೊರೋನಾ ವೈರಸ್ ಪ್ರಕರಣಗಳು ಪತ್ತೆಯಾಗಿದ್ದವು.
