ಬೆಂಗಳೂರು:- ಬೆಂಗಳೂರು ನಮ್ಮ ಮೆಟ್ರೋ ರೈಲುಗಳು ನಿತ್ಯ ಲಕ್ಷಾಂತರ ಜನರಿಗೆ ಸೇವೆ ನೀಡುತ್ತಿವೆ. ಪ್ರಯಾಣಿಕರ ದಟ್ಟಣೆ, ಮೆಟ್ರೋ ಸಾರಿಗೆ ಮೇಲಿನ ಅವಲಂಬನೆ ಹೆಚ್ಚಾಗುತ್ತಿದೆ.
ಈ ನಡುವೆ ಬೆಂಗಳೂರು ಜನರಿಗೆ ಮತ್ತೊಂದು ದರ ಏರಿಕೆ ಶಾಕ್ ಎದುರಾಗಿದೆ. ಹೌದು, ಮೆಟ್ರೋ ಪ್ರಯಾಣಿಕರಿಗೆ ಶಾಕ್ ನೀಡಲು ಬಿಎಂಆರ್ಸಿಎಲ್ ಮುಂದಾಗಿದೆ. ಜನವರಿಯಿಂದ ಮೆಟ್ರೋ ಪ್ರಯಾಣ ದುಬಾರಿ ಆಗುತ್ತೆ ಎನ್ನುವ ಮಾತು ಕೇಳಿ ಬಂದಿದೆ.
ಈಗಾಗಲೇ ಹಲವು ಬಾರಿ ಮೆಟ್ರೋ ದರ ಏರಿಕೆ ಬಗ್ಗೆ ಬಿಎಂಆರ್ಸಿಎಲ್ ಪ್ರಸ್ತಾಪ ಮಾಡಿತ್ತು. ಆದರೆ ಕಳೆದ ಹಲವು ವರ್ಷಗಳಿಂದ ದರ ಏರಿಕೆಯನ್ನು ಮಾಡಿರಲಿಲ್ಲ. ಸದ್ಯ 20% ಟಿಕೆಟ್ ದರ ಏರಿಕೆ ಸಾಧ್ಯತೆ ಇದ್ದು, ಈ ಹಿನ್ನೆಲೆ ಟಿಕೆಟ್ ದರ ಏರಿಕೆಗೆ ಈಗಾಗಲೇ ನಮ್ಮ ಮೆಟ್ರೋ ಕಮಿಟಿ ರಚಿಸಿತ್ತು. ಇದೀಗ ದರ ಪರಿಷ್ಕರಣೆ ಸಂಬಂಧ ಬಿಎಂಆರ್ಸಿಎಲ್ ಸಲಹೆ- ಸೂಚನೆಗಳನ್ನು ಪಡೆದಿದೆ.
ಮೆಟ್ರೋ ಟಿಕೆಟ್ ದರ ಶೇ 15 ರಷ್ಟು ಹೆಚ್ಚಳಕ್ಕೆ ನಮ್ಮ ಮೆಟ್ರೋ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದೆ. ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ್ದೇ ಆದಲ್ಲಿ ಜನವರಿಯಿಂದ ದರ ಹೆಚ್ಚಾಗುವ ಸಾಧ್ಯತೆಗಳಿವೆ. ಈ ಬಗ್ಗೆ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕ ಅಭಿಪ್ರಾಯ ಅವಧಿಯಲ್ಲಿ ಬಹುತೇಕರು ದರ ಹೆಚ್ಚಳಕ್ಕೆ ಆಕ್ಷೇಪಣೆಗಳನ್ನು ಸಲ್ಲಿಸಿದ್ದಾರೆ ಎನ್ನಲಾಗಿದೆ. ಜನರ ಆಕ್ಷೇಪದ ನಡುವೆಯೂ ಟಿಕೆಟ್ ದರ ಹೆಚ್ಚಳಕ್ಕೆ ಸಮಿತಿ ಅಸ್ತು ಎಂದಿದೆ. ಹೀಗಾಗಿ ಶೇ 15 ರಷ್ಟು ಮೆಟ್ರೋ ಪ್ರಯಾಣ ದರ ಪರಿಷ್ಕರಣೆ ಸಾಧ್ಯತೆ ಇದೆ.