ಶಿವಮೊಗ್ಗ: ಸೋಗಾನೆಯಲ್ಲಿರುವ ವಿಮಾನ ನಿಲ್ದಾಣದಿಂದ ವಿಮಾನಗಳ ಹಾರಾಟಕ್ಕೆ ನಾಗರಿಕ ವಿಮಾನಯಾನ ನಿರ್ದೇಶನಾಲಯ ನೀಡಿದ್ದ ಅನುಮತಿ ಇನ್ನು 20 ದಿನದಲ್ಲಿ ಮುಕ್ತಾಯಗೊಳ್ಳಲಿದೆ. ಒಂದು ವರ್ಷದ ಅವಧಿಗೆ ಲೈಸೆನ್ಸ್ ಅವಧಿ ವಿಸ್ತರಿಸಬೇಕಿದ್ದ ಡಿಜಿಸಿಎ ಈ ಬಾರಿ ಕೇವಲ ಒಂದು ತಿಂಗಳ ಅವಧಿಗೆ ಮಾತ್ರ ಲೈಸೆನ್ಸ್ ಅವಧಿ ವಿಸ್ತರಿಸಿದೆ. ಹೀಗಾಗಿ ವಿಮಾನ ಪ್ರಯಾಣಿಕರಿಗೆ ವಿಮಾನ ಹಾರಾಟ ನಡೆಸುತ್ತಾ ಅಥವಾ ಹಾರಾಟ ಸ್ಥಗಿತಗೊಳಿಸುತ್ತಾ ಎಂಬ ಪ್ರಶ್ನೆ ಎದ್ದಿದೆ.
ಶಿವಮೊಗ್ಗ ವಿಮಾನ ನಿಲ್ದಾಣದಿಂದ ವಿಮಾನಗಳ ಹಾರಾಟಕ್ಕೆ ಡಿಜಿಸಿಎ ಕಳೆದ ಬಾರಿ ಒಂದು ವರ್ಷದ ಅವಧಿಗೆ ಲೈಸೆನ್ಸ್ ನೀಡಿತ್ತು. ಈ ಅವಧಿ ಆಗಸ್ಟ್ 23ಕ್ಕೆ ಮುಕ್ತಾಯಗೊಂಡಿದೆ. ಲೈಸೆನ್ಸ್ ನವೀಕರಣದ ವೇಳೆ ಕೆಲವು ಕಾರಣ ನೀಡಿ ಲೈಸೆನ್ಸ್ ಅವಧಿಯನ್ನು ಕೇವಲ ಒಂದು ತಿಂಗಳಿಗೆ ವಿಸ್ತರಣೆ ಮಾಡಿದೆ. ಸೆ.23ಕ್ಕೆ ಈ ಅವಧಿ ಮುಗಿಯಲಿದೆ. ಈ ಲೈಸೆನ್ಸ್ ಅವಧಿ ನವೀಕರಣಗೊಳ್ಳದೆ ಇದ್ದರೆ ಶಿವಮೊಗ್ಗದಿಂದ ವಿಮಾನಗಳ ಹಾರಾಟಕ್ಕೆ ಸಮಸ್ಯೆಯಾಗಲಿದೆ.
ರಾಜ್ಯ ಸರ್ಕಾರದ ಕೈಗಾರಿಕಾ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ನಿಗಮವು (KSIIDC) ಶಿವಮೊಗ್ಗ ವಿಮಾನ ನಿಲ್ದಾಣವನ್ನು ನಿರ್ವಹಿಸುತ್ತಿದೆ. ವಿಮಾನ ನಿಲ್ದಾಣದಿಂದ ವಿಮಾನಗಳ ಹಾರಾಟಕ್ಕೆ ಡಿಜಿಸಿಎ ಪರವಾನಗಿ ನೀಡುವಾಗ ಸುರಕ್ಷತೆ ಮತ್ತು ಭದ್ರತೆ ವಿಚಾರಗಳ ಬಗ್ಗೆ ಕೆಲವು ಷರತ್ತು ವಿಧಿಸಿತ್ತು. ಕೆಎಸ್ಐಐಡಿಸಿ ಸಂಸ್ಥೆಯು ಈ ಷರತ್ತುಗಳನ್ನು ಪೂರ್ತಿಯಾಗಿ ಪೂರೈಸಿಲ್ಲ. ಇದೇ ಕಾರಣಕ್ಕೆ ಈಗ ಡಿಜಿಸಿಎ ಶಿವಮೊಗ್ಗ ವಿಮಾನ ನಿಲ್ದಾಣದ ಲೈಸೆನ್ಸ್ ಅವಧಿಯನ್ನು ಕೇವಲ ಒಂದು ತಿಂಗಳಿಗೆ ಮಾತ್ರ ನವೀಕರಿಸಿದೆ