ಶಿಡ್ಲಘಟ್ಟ: ನಾನು ಪಾಠ ಮಾಡುವ ಶಾಲಾ ಮಕ್ಕಳೇ ನನ್ನ ಮಕ್ಕಳು, ಅವರ ಸಂತೋಷದಲ್ಲಿ ನನ್ನ ಸಂತೋಷ ಇದೆ ಎಂದು ಶಾಲಾ ಶಿಕ್ಷಕಿ ಮಂಗಳಾ ಹೇಳಿದರು. ತಾಲ್ಲೂಕಿನ ಜಯಂತಿಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಪಾದ ರಕ್ಷೆಗಳನ್ನು ವಿತರಿಸಿ ಅವರು ಮಾತನಾಡಿದರು.
ನಾನು ಅತ್ಯಂತ ಬಡತನದಲ್ಲಿ ಬೆಳೆದವಳು, ನನಗಾಗಿ ಒಂದು ಜೊತೆ ಚಪ್ಪಳಿ ಕೊಡಿಸಲು ನನ್ನ ತಂದೆಗೆ ಸಾಧ್ಯವಾಗಿರಲಿಲ್ಲ. ಕಷ್ಟ ಪಟ್ಟು ದುಡಿಯಲು ಕೂಲಿ ಕೆಲಸ ಕೂಡ ದೊರೆಯದಂತಹ ದಿನಗಳವು ಎಂದು ಭಾವುಕರಾದರು.
ಯಾರೋ ನನ್ನನ್ನು ಗುರ್ತಿಸಲಿ ಎಂದು ಸೇವೆ ಮಾಡುವಳಲ್ಲ . ನನ್ನ ಆತ್ಮ ತೃಪ್ತಿ ಮತ್ತು ಮಕ್ಕಳ ಮುಖದಲ್ಲಿ ಸಂತೋಷ ಕಾಣಲು ಸೇವೆ ಮಾಡುತ್ತಿದ್ದೇನೆ ಎಂದರು.
ಮಂಗಳಾ ಟೀಚರ್ ಎಂದೇ ಖ್ಯಾತಿ ಪಡೆದಿರುವ ಇವರು ತಾವಿರುವ ಶಾಲೆಗಳಲ್ಲಿ ಗಣೇಶ ಚತುರ್ಥಿ, ಶಾರದ ಪೂಜೆ, ಸ್ವಾತಂತ್ರ್ಯ ದಿನಾಚರಣೆ, ಮಕ್ಕಳ ಜಯಂತಿ ಹೀಗೆ ವಿಶೇಷ ದಿನಗಳಲ್ಲಿ ತಮ್ಮ ಸ್ವಂತ ಹಣದಿಂದ ಮಕ್ಕಳಿಗೆ ಉಡುಗೊರೆ ಕೊಡುವುದು ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮಕ್ಕಳಿಗೆ ವಿವಿಧ ವೇಶ ಭೂಷಣಗಳ ವಸ್ತ್ರಾಲಂಕಾರ ಮಾಡಿಸಿ ಸಂತೋಷ ಪಡುತ್ತಾರೆ. ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕಿ ರಾಮಾಂಜಿನಮ್ಮ, ಸಹ ಶಿಕ್ಷಕ ಶನಾಜ್ ಬೇಗ್ ಹಾಗು ಚೈತ್ರ ಇನ್ನಿತರರು ಉಪಸ್ಥಿತರಿದ್ದರು.