ಹರ್ಯಾಣ: ಐವತ್ತಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದ ಮೇಲೆ ಸರ್ಕಾರಿ ಶಾಲೆಯ ಪ್ರಾಂಶುಪಾಲರನ್ನು ಬಂಧಿಸಿರುವ ಘಟನೆ ಹರ್ಯಾಣದ ಜಿಂದ್ ಜಿಲ್ಲೆಯಲ್ಲಿ ನಡೆದಿದೆ. ಹರ್ಯಾಣ ರಾಜ್ಯ ಮಹಿಳಾ ಆಯೋಗವು ಪೊಲೀಸರಿಗೆ ಅಲ್ಟಿಮೇಟಮ್ ನೀಡಿದ ನಂತರ ಬಂಧಿಸಲಾಗಿದೆ. ಶಾಲೆಯ ಕೆಲವು ವಿದ್ಯಾರ್ಥಿನಿಯರ ಸೆಪ್ಟೆಂಬರ್ 14 ರಂದು ಪೊಲೀಸರಿಗೆ ದೂರು ನೀಡಿದ್ದರು. ಆದರೆ ಅಕ್ಟೋಬರ್ 30 ರಂದು ಮಾತ್ರ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಆಯೋಗ ಹೇಳಿದೆ.
ಈ ಬಗ್ಗೆ ತನಿಖೆ ನಡೆಸಲು ವಿಶೇಷ ತನಿಖಾ ತಂಡ (ಎಸ್ಐಟಿ) ಕೂಡ ರಚಿಸಲಾಗಿದೆ. ಸರ್ಕಾರಿ ಶಾಲೆಯ 50ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಪ್ರಾಂಶುಪಾಲರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಆಡಳಿತ ಮತ್ತು ಸರ್ಕಾರಕ್ಕೆ ಪತ್ರ ಬರೆದಿದ್ದರು. ಆದರೆ ಶಿಕ್ಷಣ ಇಲಾಖೆ ಆರೋಪಿಯನ್ನು ಅಕ್ಟೋಬರ್ 27ರಂದು ಅಮಾನತುಗೊಳಿಸಿದ್ದು ಮಾತ್ರ ಮುಂದಿನ ಕ್ರಮ ಕೈಗೊಂಡಿಲ್ಲ.
ಹರ್ಯಾಣದ ಮಹಿಳಾ ಆಯೋಗವು ಈ ಪ್ರಕರಣದಲ್ಲಿ ಮಧ್ಯ ಪ್ರವೇಶಿಸಿದ್ದು, ನಂತರ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. 55 ವರ್ಷದ ಪ್ರಾಂಶುಪಾಲರನ್ನು ಬಂಧಿಸಲಾಗಿದೆ. ನಾವು ವಿದ್ಯಾರ್ಥಿನಿಯರಿಂದ ಪ್ರಾಂಶುಪಾಲರ ವಿರುದ್ಧ 60 ಲಿಖಿತ ದೂರುಗಳನ್ನು ಸ್ವೀಕರಿಸಿದ್ದೇವೆ. ಈ ಪೈಕಿ 50 ದೂರುಗಳು ಆರೋಪಿಗಳಿಂದ ದೈಹಿಕ ಕಿರುಕುಳಕ್ಕೆ ಸಂಬಂಧಿಸಿದ್ದಾಗಿತ್ತು.
ಆರೋಪಿ ತನ್ನ ಛೇಂಬರ್ಗೆ ಕರೆಸಿಕೊಂಡು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಜಿಂದ್ ಜಿಲ್ಲೆಯ ಪೊಲೀಸರು ಸೋಮವಾರ ಪ್ರಾಂಶುಪಾಲರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354-ಎ (ಲೈಂಗಿಕ ಕಿರುಕುಳ), 341 ಮತ್ತು 342 ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.