ರಾಗಿಯ ಕಣಜ ಆನೇಕಲ್ ತಾಲೂಕಿನಲ್ಲಿ ರೈತರು ಕೃಷಿಯ ಜೊತೆಗೆ ತೋಟಗಾರಿಕೆ ಬೆಳೆಗಳಲ್ಲಿಯೂ ಹೆಚ್ಚು ತೊಡಗಿದ್ದಾರೆ. ಹಬ್ಬದ ವೇಳೆ ಬಂಪರ್ ಬೆಲೆ ಪಡೆದಿದ್ದ ಸೇವಂತಿ ಕೆ.ಜಿ 25-30ಕ್ಕೆ ಇಳಿದಿದೆ.
ತಾಲ್ಲೂಕಿನ ಸಬ್ಮಂಗಲ, ಗುಡ್ಡನಹಳ್ಳಿ, ರಾಜಾಪುರ, ಕರ್ಪೂರು, ಭಕ್ತಿಪುರ, ಮಾಯಸಂದ್ರ ಹಾಗೂ ಪಟ್ಟಣಕ್ಕೆ ಸಮೀಪದ ತಮಿಳುನಾಡಿನ ಕೊಮಾರನಹಳ್ಳಿ, ಸೆಕೆಂಡ್ ಮದ್ರಾಸ್, ಪೂನಹಳ್ಳಿ ಭಾಗಗಳಲ್ಲಿ ಹೆಚ್ಚು ಸೇವಂತಿ ಬೆಳೆಯಲಾಗುತ್ತದೆ. ಉತ್ತಮ ಫಸಲು ಬಂದರೂ, ಹೂ ಬೇಡಿಕೆ ಕಳೆದುಕೊಂಡಿತು.
ತೋಟಗಾರಿಕೆ ಇಲಾಖೆಯಿಂದ ಅಡಿಕೆ ದೋಟಿ, ಅಡಿಕೆ ಸುಲಿಯುವ ಯಂತ್ರಗಳಿಗೆ ಅರ್ಜಿ ಆಹ್ವಾನ
ಮಾರುಕಟ್ಟೆಗೆ ಹೂ ತೆಗೆದುಕೊಂಡು ಹೋದರೂ ಬಂಡವಾಳ ಸಿಗುತ್ತಿಲ್ಲ. ಹೀಗಾಗಿ ಹೂ ಕಟಾವು ಕೂಲಿ, ಸಾಗಣೆ ವೆಚ್ಚ ಮಾಡಿ ಕೈ ಸುಟ್ಟುಕೊಳ್ಳುವ ಬದಲು ತೋಟದಲ್ಲೇ ಬಿಟ್ಟರೆ ಗೊಬ್ಬರ ಆಗುತ್ತದೆ ಎಂಬ ನಿರ್ಧಾರಕ್ಕೆ ರೈತರು ಬಂದಿದ್ದಾರೆ.
ಜನವರಿಯಲ್ಲಿ ಹೂವಿನ ಅಂಟು ನಾಟಿ ಮಾಡಿದರೆ ಆಗಸ್ಟ್-ಸೆಪ್ಟೆಂಬರ್ ತಿಂಗಳಿನಲ್ಲಿ ತೋಟದ ತುಂಬಾ ಹೂ ಫಸಲು ಬಿಡುತ್ತದೆ. ಈ ಹೂವುಗಳಿಗೆ ಗೌರಿ ಗಣೇಶ ಹಬ್ಬ, ವರಲಕ್ಷ್ಮಿ ಹಾಗೂ ಓಣಂ ಹಬ್ಬಗಳಲ್ಲಿ ಹೆಚ್ಚಿನ ಬೇಡಿಕೆ ಇರುತ್ತದೆ. ಗಣಪತಿ ಹಬ್ಬದ ಸಂದರ್ಭದಲ್ಲಿ ಕೆ.ಜಿ ಹೂವಿಗೆ ₹200-₹300 ಇತ್ತು. ಹಬ್ಬದ ಬಳಿಕ ₹25-30ಕ್ಕೆ ಇಳಿದಿದೆ. ಇದರಿಂದ ರೈತರು ಮಾಡಿದ ಖರ್ಚಿನ ಹಣವು ಸಹ ಬಾರದಂತಾಗಿದೆ. ಬೆಲೆ ಇದ್ದಾಗ ಬೆಳೆ ಇಲ್ಲ, ಬೆಳೆಯಿದ್ದಾಗ ಬೆಲೆ ಇಲ್ಲ ಎನ್ನುತ್ತಾ ರೈತರು ಪರದಾಡುವಂತಾಗಿದೆ ಎಂದು ಚಿಕ್ಕಹಾಗಡೆಯ ರೈತ ಮನು ತಿಳಿಸಿದರು.
ಉಳುಮೆ, ಗೊಬ್ಬರ, ಡ್ರಿಪ್ಸ್ ಗೊಬ್ಬರ ಸೇರಿದಂತೆ ವಿವಿಧ ಖರ್ಚು ಸೇರಿ ಒಂದು ಎಕರೆ ಸೇವಂತಿ ಬೆಳೆಯಲು ₹1ಲಕ್ಷದವರೆಗೂ ಖರ್ಚು ತಗಲುತ್ತದೆ. ಹೂವು ಕೀಳಲು ಒಬ್ಬರಿಗೆ ₹400 ಜೊತೆ ಊಟ ನೀಡಬೇಕು. 15 ದಿನಗಳಿಗೊಮ್ಮೆ ಔಷಧಿ ಸಿಂಪಡಿಸಬೇಕು. ಇಷ್ಟೆಲ್ಲಾ ಖರ್ಚು ಮಾಡಿ ಲಾಭ ಬಂದಿಲ್ಲ. ಸರ್ಕಾರ ನಮ್ಮತ್ತ ಗಮನ ಹರಿಸಿ ಪರಿಹಾರ ನೀಡಬೇಕು ಎಂದು ರಾಜಾಪುರದ ರೈತ ರುದ್ರಯ್ಯ ಒತ್ತಾಯಿಸಿದ್ದಾರೆ.
ವಿವಿಧೆಡೆ ಡೇರಾ ಹೂವು ಕಣ್ಮನ ಸೆಳೆಯುತ್ತಿದ್ದವು. ಒಂದು ಡೇರಾ ಹೂವಿಗೆ ಹಬ್ಬದ ಸಂದರ್ಭದಲ್ಲಿ ₹20-₹25ಗೆ ಮಾರಾಟವಾಗುತ್ತಿತ್ತು. ಆಕರ್ಷಕ ಡೇರಾ ಹೂವು ಇತ್ತೀಚಿನ ದಿನಗಳಲ್ಲಿ ಕಾಣೆಯಾಗಿದೆ. ಸಮಂದೂರು ಪಂಚಾಯಿತಿ ವ್ಯಾಪ್ತಿಯಲ್ಲಿ ಹೆಚ್ಚು ಬೆಳೆಯುತ್ತಿದ್ದ ಡೇರಾ ಈ ವರ್ಷ ಕಡಿಮೆಯಾಗಿದೆ.