ನವದೆಹಲಿ: ಕಲಾಪ ನಡೆಯುತ್ತಿರುವಾಗಲೇ ಭದ್ರತಾ ಲೋಪ (Security Breach) ಸಂಭವಿಸಿದ ಬೆನ್ನಲ್ಲೇ ಲೋಕಸಭಾ ಸ್ಪೀಕರ್ (Lok Sabha Speaker) ಓಂ ಬಿರ್ಲಾ (Om Birla) ಅವರು ವೀಕ್ಷಕರಿಗೆ ನೀಡುವ ಪಾಸ್ ಅನ್ನು ನಿರ್ಬಂಧಿಸಿದ್ದಾರೆ.
ಇಂದು ಇಬ್ಬರು ಲೋಕಸಭಾ (Lok Sabha) ಗ್ಯಾಲರಿಯಿಂದ ಕಲಾಪ ನಡೆಯುವ ವೇಳೆ ಮೇಲಿನಿಂದ ಜಿಗಿದು ಸ್ಮೋಕ್ ಬಾಂಬ್ ಸಿಡಿಸಿದ್ದರು. ಈ ಘಟನೆಯಿಂದ ಎಚ್ಚೆತ್ತು ಬಿರ್ಲಾ ಅವರು ವೀಕ್ಷಕರ ಪ್ರವೇಶಕ್ಕೆ ನಿರ್ಬಂಧ ಹೇರಿದ್ದಾರೆ.
ಒಳ ನುಗ್ಗಿದ ಇಬ್ಬರನ್ನು ಬಂಧಿಸಲಾಗಿದೆ ಮತ್ತು ಅವರ ಬಳಿಯಿದ್ದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಹೊರಗಡೆ ಪ್ರತಿಭಟನೆ ನಡೆಸಿದ ಇಬ್ಬರನ್ನು ಬಂಧಿಸಲಾಗಿದೆ ಎಂದು ಓಂ ಬಿರ್ಲಾ ಹೇಳಿದ್ದಾರೆ.
ಸಂಸತ್ ಒಳ ಪ್ರವೇಶಕ್ಕೆ ಪಾಸ್ ಇಲ್ಲದೇ ಯಾರನ್ನು ಬಿಡಲ್ಲ. ಮೂರು ಹಂತದಲ್ಲಿ ತಪಾಸಣೆ ಮಾಡಿಯೇ ಬಿಡಲಾಗುತ್ತದೆ. ಪೆನ್, ಪುಸ್ತಕ, ನಾಣ್ಯ ಸೇರಿದಂತೆ ಯಾವುದನ್ನು ತೆಗೆದುಕೊಂಡು ಹೋಗುವಂತಿಲ್ಲ. ಕಲಾಪ ವರದಿ ಮಾಡುವ ಪತ್ರಕರ್ತರು ಮೊಬೈಲನ್ನು ಒಳಗಡೆ ತೆಗೆದುಕೊಂಡು ಹೋಗುವಂತಿಲ್ಲ. ಇಷ್ಟೊಂದು ದೊಡ್ಡ ಮಟ್ಟದ ಭದ್ರತಾ ತಪಾಸಣೆ ನಡೆಯುವಾಗ ಅವರು ಕಲರ್ ಸ್ಮೋಕ್ ತೆಗೆದುಕೊಂಡು ಹೋಗಿದ್ದು ಹೇಗೆ ಎಂಬ ಗಂಭೀರ ಪ್ರಶ್ನೆ ಎದ್ದಿದೆ.
ಸಂಸತ್ ಮೇಲೆ ದಾಳಿ ನಡೆದು 22 ವರ್ಷವಾದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಹುತಾತ್ಮ ಭದ್ರತಾ ಸಿಬ್ಬಂದಿಗೆ ಗೌರವ ಸಲ್ಲಿಸಲಾಗಿತ್ತು. ಈ ದೀನವೇ ದೊಡ್ಡ ಮಟ್ಟದ ಭದ್ರತಾ ಲೋಪ ನಡೆದಿದೆ.