ಮಂಡ್ಯ :- ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸೂಕ್ತ ಭದ್ರತೆ ಒದಗಿಸಲು ವೈಫಲ್ಯವಾಗಿರುವ ಪಂಜಾಬ್ ಸರ್ಕಾರಕ್ಕೆ ಆಡಳಿತ ನಡೆ ಸುವ ಯೋಗ್ಯತೆ ಇಲ್ಲ. ಹೀಗಾಗಿ ಪಂಜಾಬ್ ಸರ್ಕಾರವನ್ನು ಕೂಡಲೇ ವಜಾ ಮಾಡಬೇಕೆಂದು ಬಿಜೆಪಿ ಯುವ ಮೋರ್ಚಾ ಕಾರ್ಯಕ ರ್ತರು ಮದ್ದೂರು ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಪ್ರವಾಸಿ ಮಂದಿರದ ಆವರಣದಲ್ಲಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು ಪಂಜಾಬ್ ಸರ್ಕಾರದ ವಿರುದ್ಧ ಧಿಕ್ಕಾರಗಳನ್ನು ಕೂಗಿ ಬೆಂಗಳೂರು – ಮೈಸೂರು ರಾಷ್ಟ್ರಿಯ ಹೆದ್ದಾರಿಯನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದರು.
ನಂತರ ತಾಲ್ಲೂಕು ಯುವ ಮೋರ್ಚಾ ಅಧ್ಯಕ್ಷ ಸುನೀಲ್ ಕುಮಾರ್ ಮಾತನಾಡಿ ದೇಶದ ಪ್ರಧಾನ ಮಂತ್ರಿಗಳಿಗೆ ಗೌರವ ಕೊಡುವುದು ಎಲ್ಲ ಸರ್ಕಾರಗಳ ಕರ್ತವ್ಯ. ಆದರೆ ಪಂಜಾಬ್ ಸರ್ಕಾರ ಪ್ರಧಾನಿ ನರೇಂದ್ರ ಮೋದಿಯವರಿಗೆ ಭಾರತ ಮತ್ತು ಪಾಕಿಸ್ತಾನದ ಗಡಿ ಭಾಗದಲ್ಲಿ ಸೂಕ್ತ ಭದ್ರತೆ ನೀಡದೆ ಬೇಜವಾಬ್ದಾರಿತನ ತೋರಿದೆ.

ಇದೊಂದು ಖಂಡನಾರ್ಹ ವಿಚಾರವಾಗಿದ್ದು, ಇದು ಪೂರ್ವ ನಿಯೋಜಿತ ಸಂಚಾಗಿದ್ದು. ಹೀಗಾಗಿ ಪಂಜಾಬ್ ಸರ್ಕಾರವನ್ನು ಕೂಡಲೇ ವಜಾ ಮಾಡಬೇಕು ಆಗ್ರಹಿಸಿದರು. ಹಾಗೂ ಈ ಬಗ್ಗೆ ಕೇಂದ್ರ ಸರ್ಕಾರ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮ.ನ.ಪ್ರಸನ್ನ ಕುಮಾರ್, ನವೀನ್, ಅರವಿಂದ್, ಅಭಿಪಾಂಡು, ಬಾಬು, ಕೆಂಪಬೋರಯ್ಯ, ಎಂ.ಸಿ.ಸಿದ್ದು, ಅನಿಲ್, ಕೆ.ಜೆ.ಸುರೇಶ್, ಎನ್.ಜೆ ಮಧುಕುಮಾರ್, ಧನಂಜಯ, ಶ್ರೇಯಸ್, ಕೆಂಪೇಗೌಡ, ನಿತಿನ್, ಬಾಲು, ರಂಜಿತ್, ತೀರ್ಥಚಾರ್, ಮಾಧು ಹಾಗೂ ಇತರರು ಇದ್ದರು.
ವರದಿ : ಗಿರೀಶ್ ರಾಜ್ ಮಂಡ್ಯ.