ಮುಂಬೈ:- ಹೃದಯ ಸ್ತಂಭನದಿಂದಾಗಿ ಸಹಾರಾ ಇಂಡಿಯಾ ಪರಿವಾರದ ಸಂಸ್ಥಾಪಕ ‘ಸಹರಾಶ್ರೀ’ ಸುಬ್ರತಾ ರಾಯ್ ಅವರು ಮಂಗಳವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ.
ಅವರಿಗೆ 75 ವರ್ಷ ವಯಸ್ಸಾಗಿತ್ತು. ಭಾನುವಾರ ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು.
ರಾಯ್ ನಿಧನಕ್ಕೆ ಸಂತಾಪ ಸೂಚಿಸಿರುವ ಸಹಾರಾ ಇಂಡಿಯಾ ಗ್ರೂಪ್, “ಸಹಾರಾ ಇಂಡಿಯಾ ಪರಿವಾರದ ಮ್ಯಾನೇಜಿಂಗ್ ವರ್ಕರ್ ಮತ್ತು ಚೇರ್ಮನ್ ಆಗಿರುವ ‘ಸಹರಾಶ್ರೀ’ ಸುಬ್ರತಾ ರಾಯ್ ಅವರ ನಿಧನವನ್ನು ಕಂಪನಿಯು ತೀವ್ರ ದುಃಖದಿಂದ ತಿಳಿಸುತ್ತಿದೆ. ಅಂತಿಮ ವಿಧಿ ವಿಧಾನಗಳ ಬಗ್ಗೆ ವಿವರಗಳನ್ನು ಸರಿಯಾದ ಸಮಯದಲ್ಲಿ ತಿಳಿಸಲಾಗುವುದು. ಅವರು ನಮಗೆ ಮಾರ್ಗದರ್ಶಕರಾಗಿದ್ದರು. ಜೊತೆಗೆ ಕೆಲಸ ಮಾಡುವ ಎಲ್ಲರಿಗೂ ಸ್ಫೂರ್ತಿದಾಯಕವಾಗಿದ್ದರು” ಎಂದು ಅಧಿಕೃತ ಹೇಳಿಕೆಯಲ್ಲಿ ಮಾಹಿತಿ ನೀಡಿದೆ.
ಸಹಾರಾ ಇಂಡಿಯಾ ಪರಿವಾರವು ರಾಯ್ ಅವರ ಪರಂಪರೆಯನ್ನು ಎತ್ತಿಹಿಡಿಯಲು ಬದ್ಧವಾಗಿದೆ ಮತ್ತು ಸಂಸ್ಥೆಯು ಅವರ ದೃಷ್ಟಿಕೋನವನ್ನು ಗೌರವಿಸಿ, ಕೆಲಸ ಮಾಡುವುದನ್ನು ಮುಂದುವರಿಸುತ್ತದೆ ಎಂದು ಹೇಳಿದೆ. ಮೃತರು ಪತ್ನಿ ಸ್ವಪ್ನಾ ರಾಯ್, ಸುಶಾಂತೋ ರಾಯ್ ಮತ್ತು ಸೀಮಂತೋ ರಾಯ್ ಎಂಬ ಇಬ್ಬರು ಪುತ್ರರನ್ನು ಅಗಲಿದ್ದಾರೆ.