ಬೆಂಗಳೂರು ;- ರಾಜಧಾನಿ ಬೆಂಗಳೂರಿನಲ್ಲಿ ಮಹಿಳೆಯರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿದ್ದೇವೆ ನಗರ ಪೊಲೀಸ್ ಕಮಿಷನರ್ ಬಿ. ದಯಾನಂದ್ ಹೇಳಿದ್ದಾರೆ.
ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಮಹಿಳೆಯರ ಸಮಸ್ಯೆ ನಿವಾರಣೆಗೆ ಪೊಲೀಸರು ಬದ್ಧರಾಗಿದ್ದು, ನಿಮಗೆ ಯಾವುದೇ ಸಮಸ್ಯೆ ಎದುರಾದರೂ ಕೂಡಲೇ 112 ಗೆ ಕರೆ ಮಾಡಿದರೆ ಸಕಾಲಕ್ಕೆ ನಮ್ಮ ಪೊಲೀಸರು ಆಗಮಿಸಿ ನಿಮ್ಮ ಸಮಸ್ಯೆ ಆಲಿಸಲಿದ್ದಾರೆ ಎಂದು ಅವರು ಹೇಳಿದರು.

ಮಹಿಳೆಯರ ಸುರಕ್ಷತೆ ಉದ್ದೇಶದಿಂದ ಪೊಲೀಸ್ ಇಲಾಖೆ ಹೊಸ ಆಯಪ್ ಸಿದ್ಧ ಪಡಿಸಿದ್ದು ಅಗತ್ಯವಿರುವವರು ಈ ಆಯಪ್ ಮೂಲಕ ದೂರು ನೀಡಬಹುದಾಗಿದೆ ಎಂದು ಆಯುಕ್ತರು ಹೇಳಿದರು. ಸಾರ್ವಜನಿಕರು ಯಾವುದೇ ಸಮಸ್ಯೆಯಿದ್ದರೂ ನೇರವಾಗಿ ಪೊಲೀಸರಿಗೆ ತಿಳಿಸುವ ಮೂಲಕ ಸಮಾಜದಲ್ಲಿ ಆಗುವ ಅನಾಹುತಗಳನ್ನು ತಡೆಗಟ್ಟಲು ಪೊಲೀಸರ ಕಾರ್ಯಕ್ಕೆ ಸಹಕರಿಸಬೇಕು ಎಂದು ಅವರು ಮನವಿ ಮಾಡಿಕೊಂಡರು.
ಅದೇ ರೀತಿ ಸಮಾಜಕ್ಕೆ ಪಿಡುಗಾಗಿರುವ ಮಾದಕ ದ್ರವ್ಯ ಜಾಲವನ್ನು ಮಟ್ಟ ಹಾಕಲು ಪೊಲೀಸರು ಸನ್ನದ್ಧರಾಗಿದ್ದಾರೆ. ಡ್ರಗ್ಸ್ ಮಾರಾಟ ಮಾಡುವವರ ಬಗ್ಗೆ ನಿಮಗೆ ಯಾವುದೇ ಮಾಹಿತಿ ಇದ್ದರೂ ಧೈರ್ಯವಾಗಿ ಪೊಲೀಸರಿಗೆ ತಿಳಿಸಿ ಇಲ್ಲದಿದ್ದರೆ ಪೊಲೀಸ್ ಆಯಪ್ ಮೂಲಕವಾದರೂ ದೂರು ದಾಖಲಿಸಿ ಎಂದು ಅವರು ಮನವಿ ಮಾಡಿಕೊಂಡರು.
