ಮಂಡ್ಯ :-ಮದ್ದೂರು ತಾಲ್ಲೂಕಿನ ಮದ್ದೂರು ಕೆರೆ ಹಾಗೂ ಸೂಳೆಕೆರೆಯ ಸಮಗ್ರ ಅಭಿವೃದ್ದಿಗೆ ಅನುದಾನ ಬಿಡುಗಡೆ ಮಾಡುವ ಸಂಬಂಧ ಕೆರೆಗಳ ಪರಿವೀಕ್ಷಣೆ ಮಾಡಲಾಗುತ್ತಿದೆ ಎಂದು ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜೈಪ್ರಕಾಶ್ ತಿಳಿಸಿದರು. ಶಾಸಕ ಡಿ.ಸಿ.ತಮ್ಮಣ್ಣ ಹಾಗೂ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳೊಂದಿಗೆ ಮದ್ದೂರು ಕೆರೆಯನ್ನು ವೀಕ್ಷಣೆ ಮಾಡಿ ನಂತರ ಮಾತನಾಡಿದರು.
ಮದ್ದೂರು ಕೆರೆ 0.3 ಟಿಎಂಸಿ ಸಾಮಾಥ್ರ್ಯವನ್ನು ಹೊಂದಿದ್ದು 5 ಸಾವಿರ ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರನ್ನು ಒದಗಿಸುತ್ತಿದೆ. ಹಾಗೂ ಸೂಳೆಕೆರೆ 0.4 ಟಿಎಂಸಿ ನೀರಿನ ಸಂಗ್ರಹ ಸಾಮಾರ್ಥ್ಯವನ್ನು ಹೊಂದಿದ್ದು 6600 ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರನ್ನು ಒದಗಿಸುತ್ತಿದ್ದು, ಈ ಕೆರೆಗಳ ಸಮಗ್ರ ಅಭಿವೃದ್ದಿಯ ಜೊತೆಗೆ ಸಂಬಂಧಿಸಿದ ನಾಲೆಗಳ ಅಭಿವೃದ್ದಿ ಹಾಗೂ ರಸ್ತೆಗಳ ಅಭಿವೃದ್ಧಿ ಸೇರಿದಂತೆ ಇನ್ನಿತರ ಅಭಿವೃದ್ದಿ ಕಾರ್ಯಗಳನ್ನು ಮಾಡುವ ಜೊತೆಗೆ ಪ್ರವಾಸಿ ತಾಣವನ್ನಾಗಿ ಮಾಡಲು ಶಾಸಕ ಡಿ.ಸಿ.ತಮ್ಮಣ್ಣನವರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು,

ಈ ಹಿನ್ನೆಲೆಯಲ್ಲಿ ಇದನ್ನ ಪರಿಶೀಲಿಸಿ ಅನುಮೋದನೆ ನೀಡಲು ಸರ್ಕಾರ ಆದೇಶ ಮಾಡಿರುವ ಹಿನ್ನೆಲೆಯಲ್ಲಿ ಕೆರೆಗಳ ಹಾಗೂ ನಾಲೆಗಳ ಆಧುನೀಕರಣ ಸಂಬಂಧ ಅಧಿಕಾರಿಗಳಿಂದ ತಾಂತ್ರಿಕ ಮಾಹಿತಿ ಹಾಗೂ ಆಗುವ ವೆಚ್ಚಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದರು. ಶಾಸಕ ಡಿ.ಸಿ.ತಮ್ಮಣ್ಣ ಮಾತನಾಡಿ, ತಾಲ್ಲೂಕಿನ ಮದ್ದೂರು ಕೆರೆ ಹಾಗೂ ಸೂಳೆಕೆರೆ 19 ನೇ ಶತಮಾನದ ಪುರಾತನ ಕೆರೆಗಳಾಗಿದ್ದು, ಈ ಕೆರೆಗಳ ಸಮಗ್ರ ಅಭಿವೃದ್ದಿ, ಕೆರೆಗಳ ಹೂಳೆತ್ತಿಸುವುದು, ಗಿಡಗೆಂಟೆಗಳನ್ನು ತೆರವುಗೊಳಿಸುವುದು,
ಹಿಂದೆ ಇದ್ದಂತಹ ನೀರಿನ ಸಂಗ್ರಹವನ್ನು ಹಾಗೆಯೇ ಇರುವಂತೆ ಮಾಡುವ ಉದ್ದೇಶದಿಂದ ಸರ್ಕಾರಕ್ಕೆ 120 ಕೋಟಿ ರೂಪಾಯಿಗಳ ಪ್ರಸ್ತಾವನೆ ಸಲ್ಲಿಸಿದ್ದು ಈ ಹಿನ್ನೆಲೆಯಲ್ಲಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಆಗಮಿಸಿ ಪರಿವೀಕ್ಷಣೆ ಮಾಡುತ್ತಿರುವುದು ಸಂತಸದ ಸಂಗತಿ ಎಂದು ತಿಳಿಸಿದರು.ದಕ್ಷಿಣ ವಿಭಾಗದ ಮುಖ್ಯ ಅಭಿಯಂತರ ಶಂಕರೇಗೌಡ, ಮಂಡ್ಯ ವೃತ್ತ ಅಧೀಕ್ಷಕ ಅಭಿಯಂತರ ವಿಜಿಕುಮಾರ್, ಹೋನ್ನರಾಜ್, ಎಇಇ ಅಶೋಕ್, ಪ್ರಶಾಂತ್, ನಾಗರಾಜು, ಎಇಇಗಳಾದ ಚಂದ್ರೇಗೌಡ, ಅವಿನಾಶ್, ರಮೇಶ್, ವೆಂಕಟೇಶ್, ತಾರಾ ಸೇರಿದಂತೆ ಇತರರು ಹಾಜರಿದ್ದರು.
ವರದಿ : ಗಿರೀಶ್ ರಾಜ್ ಮಂಡ್ಯ.