ದೊಡ್ಡಬಳ್ಳಾಪುರ: ಕಳೆದ ವಾರ ಸುರಿದ ಭಾರೀ ಮಳೆಯಿಂದಾಗಿ ನಗರದ ಮೂರನೇ ವಾರ್ಡ್ ಮುತ್ಸಂದ್ರದ ಡಾ.ಬಿ.ಆರ್ ಅಂಬೇಡ್ಕರ್ ಕಾಲೋನಿಯಲ್ಲಿ ನರಸಮ್ಮ ಎಂಬುವರ ಮನೆಯ ಮೇಲ್ಛಾವಣಿ ಕುಸಿದುಬಿದ್ದಿತ್ತು. ಸ್ಥಳಕ್ಕೆ ಯಾವುದೇ ಅಧಿಕಾರಿಗಳು ಬಾರದ ಹಿನ್ನೆಲೆ ಅಜ್ಜಿ ನರಸಮ್ಮ ನೊಂದು ಪೌರಾಯುಕ್ತರ ಕಚೇರಿ ಬಳಿ ಕುಳಿತು ತಮ್ಮ ಅಳಲು ತೋಡಿಕೊಂಡರು ಯಾವುದೆ ಪ್ರಯೋಜನವಾಗಲಿಲ್ಲ. ಇದನ್ನು ತಿಳಿದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡ ಅಜ್ಜಿ ನರಸಮ್ಮನ ಮನೆಗೆ ಭೇಟಿ ನೀಡಿ ಆರ್ಥಿಕ ಸಹಾಯ ಮಾಡಿ ಮನೆ ಸರಿಪಡಿಸುವ ಭರವಸೆ ನೀಡಿದ್ದಾರೆ.
ಬಳಿಕ ಮಾತನಾಡಿದ ಅವರು ತಾಲ್ಲೂಕು ಆಡಳಿತ ಮಳೆ ಅನಾಹುತಗಳಾದಗ ಮಾತ್ರ ಸಭೆಗಳ ಮೇಲೆ ಸಭೆ ಮಾಡುತ್ತಾರೆ. ಪರಿಹಾರ ವ್ಯವಸ್ಥೆ ಮಾತ್ರ ಶೂನ್ಯವಾಗಿರುತ್ತದೆ. ಅಜ್ಜಿಯ ಮನೆ ಮಳೆಗೆ ಸಂಪೂರ್ಣ ಕುಸಿದಿದೆ. ಜೀವ ಭಯದಲ್ಲಿ ಜೀವನ ಮಾಡುವಂತ ಪರಿಸ್ಥಿತಿ ಇದೆ. ಅಧಿಕಾರಿಗಳು ತಕ್ಷಣಕ್ಕೆ ಎಸ್.ಡಿ.ಆರ್.ಎಫ್ ಅಥವಾ ಎನ್.ಡಿ.ಆರ್.ಎಫ್ ನಲ್ಲಿ ಪರಿಹಾರಕ್ಕೆ ಕ್ರಮ ಜರುಗಿಸಲು ಅವಕಾಶ ಇರುತ್ತದೆ. ಮಾಡಲು ಇಚ್ಛಾಶಕ್ತಿ ಕೊರತೆಯಿಂದ ಸೌಲಭ್ಯಗಳು ಬಡವರಿಗೆ ತಲುಪುತ್ತಿಲ್ಲ ಎಂದರು.
ಪಕ್ಷಾಂತರಕ್ಕೆ ಬೆಲೆ ತೆತ್ತಲಿದ್ದಾರೆ:
ಜೆಡಿಎಸ್ ಪಕ್ಷದ ನೆರಳಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದ ತುಮಕೂರಿನ ಮಾಜಿ ಶಾಸಕ ಗೌರಿ ಶಂಕರ್, ದಾಸರಹಳ್ಳಿಯ ಮಾಜಿ ಶಾಸಕ ಮಂಜುನಾಥ ಪಕ್ಷಕ್ಕೆ ಮೋಸ ಮಾಡುತ್ತಿದ್ದಾರೆ. ಇವರು ಜೆಡಿಎಸ್ ಚಿಹ್ನೆಯಡಿ ಶಾಸಕರಾಗಿ ಪಕ್ಷಂತಾರ ಮಾಡಿರುವುದು ಸರಿ ಇಲ್ಲ ಎಂದು ಗುಡುಗಿದರು..