ಹೊಂಬಾಳೆ ಫಿಲಂಸ್ ನಿರ್ಮಾಣದ, ರಿಷಭ್ ಶೆಟ್ಟಿ (Rishabh Shetty) ನಿರ್ದೇಶಿಸಿ ನಟಿಸಿರುವ ‘ಕಾಂತಾರ’ (Kantara) ಚಿತ್ರದ ಪೂರ್ವ ಭಾಗವಾದ ‘ಕಾಂತಾರ – ಅಧ್ಯಾಯ 1’, ಸೋಮವಾರವಷ್ಟೇ ಅದ್ಧೂರಿಯಾಗಿ ಪ್ರಾರಂಭವಾಗಿತ್ತು. ಇಂದು ಚಿತ್ರವು ಇನ್ನೊಂದು ಹೆಗ್ಗಳಿಕೆಗೆ ಪಾತ್ರವಾಗಿದೆ.
ಮಂಗಳವಾರ, ಗೋವಾದಲ್ಲಿ ಮುಕ್ತಾಯವಾದ 54ನೇ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಹೊಂಬಾಳೆ ಫಿಲಂಸ್ ನಿರ್ಮಾಣದ, ರಿಷಭ್ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ ‘ಕಾಂತಾರ’ ಚಿತ್ರಕ್ಕೆ ತೀರ್ಪುಗಾರರ ವಿಶೇಷ ಪ್ರಶಸ್ತಿ ಸಿಕ್ಕಿದೆ. ಕನ್ನಡ ಚಿತ್ರವೊಂದು ಇದೇ ಮೊದಲ ಬಾರಿಗೆ ಇಂಥದ್ದೊಂದು ಪ್ರಶಸ್ತಿಗೆ ಭಾಜನವಾಗಿದೆ. ಈ ಪ್ರಶಸ್ತಿಯನ್ನು (Award) ರಿಷಬ್ ಶೆಟ್ಟಿ, ತಮ್ಮ ನೆಚ್ಚಿನ ನಟ, ನಿರ್ದೇಶಕ ಶಂಕರ್ ನಾಗ್ (Shankar Nag) ಅವರಿಗೆ ಅರ್ಪಿಸಿದ್ದಾರೆ. ಈ ಪ್ರಶಸ್ತಿಯು ಹಿಂದೆ ಶಂಕರ್ ನಾಗ್ ಅವರಿಗೆ ಸಂದಿತ್ತು.
ಈ ಬಾರಿ ಅಂತಾರಾಷ್ಟ್ರೀಯ ಸ್ಪರ್ಧಾ ವಿಭಾಗದಲ್ಲಿ 15 ಚಿತ್ರಗಳು ಕಣದಲ್ಲಿದ್ದವು. ಈ ಪೈಕಿ ಭಾರತದಿಂದ ‘ಕಾಂತಾರ’ ಸೇರಿದಂತೆ ಒಟ್ಟು ಮೂರು ಚಿತ್ರಗಳು ಸ್ಪರ್ಧೆಯಲ್ಲಿದ್ದವು. ಈ ವಿಭಾಗದಲ್ಲಿ “ಕಾಂತಾರ” ಚಿತ್ರಕ್ಕೆ ತೀರ್ಪುಗಾರರ ವಿಶೇಷ ಪ್ರಶಸ್ತಿ ಸಿಕ್ಕಿದೆ. ಈ ಪ್ರಶಸ್ತಿ ಪ್ರಮಾಣ ಪತ್ರ, ರಜತ ಮಯೂರ ಮತ್ತು 15 ಲಕ್ಷ ರೂ. ನಗದನ್ನು ಒಳಗೊಂಡಿದೆ.