ದಾವಣಗೆರೆ: ವಸತಿ ಸಚಿವ ಜಮೀರ್ ಅಹ್ಮದ್ ಹುಚ್ಚ ಎಂದು ಕರೆದಿರುವ ಮಾಜಿ ಸಚಿವ ಹಾಗೂ ಮಾಜಿ ಶಾಸಕ ಎಂ. ಪಿ. ರೇಣುಕಾಚಾರ್ಯರೂ ಒಂದು ರೀತಿಯ ಹುಚ್ಚ ಎಂದು ಮಾಜಿ ಶಾಸಕ ಎಸ್. ರಾಮಪ್ಪ ವಾಗ್ದಾಳಿ ನಡೆಸಿದರು. ದಾವಣಗೆರೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರೇಣುಕಾಚಾರ್ಯ ಯಾವ ರೀತಿ ಮಾತನಾಡುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಹಾಗಾಗಿ, ಅವರ ಹೇಳಿಕೆಗಳನ್ನು ಯಾರೂ ಗಂಭೀರವಾಗಿ ಪರಿಗಣಿಸುವುದಿಲ್ಲ. ಜಮೀರ್ ಅಹ್ಮದ್ ಬಗ್ಗೆ ಕೀಳಾಗಿ ಮಾತನಾಡಿರುವುದು ಸರಿಯಲ್ಲ. ಹುಂಬನಂತೆ ಮಾತನಾಡುವುದು ಎಲ್ಲರಿಗೂ ತಿಳಿದಿರುವ ವಿಚಾರ ಎಂದು ಹೇಳಿದರು.
ಜಮೀರ್ ಅಹ್ಮದ್ ಖಾನ್ ಅವರು ರಸ್ತೆಯಲ್ಲಿ ಓಡಾಡಲು ಬಿಟ್ಟಿರುವುದೇ ತಪ್ಪು. ಮುಂದಿನ ಅಧಿವೇಶನದಲ್ಲಿ ಜಮೀರ್ ಅಹ್ಮದ್ ಖಾನ್ ಹೇಗೆ ಪಾಲ್ಗೊಳ್ಳುತ್ತಾರೆ ಎಂಬುದನ್ನು ನೋಡುತ್ತೇವೆ ಎಂಬ ಹೇಳಿಕೆ ನೀಡಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಬಿ. ವೈ. ವಿಜಯೇಂದ್ರ ಯಡಿಯೂರಪ್ಪರದ್ದು ಧಮಕಿ ರೀತಿಯದ್ದು. ಈ ರೀತಿಯ ಪ್ರಚೋದನಕಾರಿ ಹೇಳಿಕೆಯು ರಾಜ್ಯಾಧ್ಯಕ್ಷ ಹುದ್ದೆಗೆ ಶೋಭೆ ತರುವಂಥದ್ದಲ್ಲ. ಈ ಹೇಳಿಕೆಯನ್ನು ಖಂಡಿಸುವುದಾಗಿ ಹೇಳಿದರು.
ಬಿ. ವೈ. ವಿಜಯೇಂದ್ರ ರೀತಿಯಲ್ಲಿ ನಮಗೂ ಮಾತನಾಡಲು ಬರುತ್ತದೆ. ಧಮ್ಕಿ ಹಾಕುವುದು, ರೌಡಿಗಳಂತೆ ಬೆದರಿಕೆ ಹಾಕುವುದು, ಹೊಡೀತೀವಿ, ಬಡೀತಿವಿ, ಹೋಗಲು ಬಿಡಲ್ಲ ಇಂಥ ಮಾತುಗಳು ಬಿ. ವೈ. ವಿಜಯೇಂದ್ರರಿಗೆ ಶೋಭೆ ತರುವುದಿಲ್ಲ. ನಾವು ಎಲ್ಲಾ ರೀತಿಯಲ್ಲಿಯೂ ಸಿದ್ಧರಿದ್ದೇವೆ. ಈ ರೀತಿ ಬೆದರಿಕೆ ಹಾಕಿದರೆ ಜಗ್ಗುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.