ಯಾದಗಿರಿ : ರೈತರ ವಿರೋಧದ ನಡುವೆಯೂ ರಾತ್ರೋರಾತ್ರಿಗೆ ನೆರೆಯ ತೆಲಂಗಾಣಕ್ಕೆ ಸರ್ಕಾರ ನೀರು ಬಿಡುತ್ತಿದೆ. ನಿರಂತರವಾಗಿ ತೆಲಂಗಾಣಕ್ಕೆ ನೀರು ಹರಿಸುತ್ತಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನಲ್ಲಿರುವ ಬಸವಸಾಗರ ಜಲಾಶಯದಿಂದ ಸರ್ಕಾರ ತೆಲಂಗಾಣಕ್ಕೆ ನೀರು ಹರಿಸುತ್ತಿದೆ. ಕಳೆದ ಮೂರ್ನಾಲ್ಕು ದಿನಗಳಿಂದಲೂ ಕೂಡ ರಾತ್ರಿ ವೇಳೆಯಲ್ಲಿ ನೀರು ಬಿಡಲಾಗ್ತಿದ್ದು, ಈವರೆಗೂ ಸುಮಾರು 1.24 ಟಿಎಂಸಿ ನೀರನ್ನು ತೆಲಂಗಾಣಕ್ಕೆ ಬಿಡಲಾಗಿದ್ದು, ರೈತರ ಕಿಚ್ಚು ಹೆಚ್ಚಾಗುವಂತೆ ಮಾಡಿದೆ.
ಯಾದಗಿರಿ, ವಿಜಯಪುರ, ಕಲಬುರಗಿ, ರಾಯಚೂರು ಜಿಲ್ಲೆಯ ರೈತರು ನಾರಾಯಣಪುರ ನೀರನ್ನೇ ಅವಲಂಬಿಸಿದ್ದಾರೆ. ನಾಲ್ಕು ಜಿಲ್ಲೆಗಳು ಸೇರಿ 4 ಲಕ್ಷ ಎಕ್ಟೇರ್ ಪ್ರದೇಶದ ಕೃಷಿಗೆ ಇದೇ ಡ್ಯಾಂನ ನೀರು ಬಳಕೆಯಾಗುವುದು. ಕಳೆದ ವರ್ಷ ಡ್ಯಾಂನಲ್ಲಿ ನೀರಿನ ಕೊರತೆ ಇದ್ದ ಕಾರಣ ರೈತರಿಗೆ ಎರಡನೇ ಅವಧಿಗೆ ನೀರು ಬಿಡಲು ಹಿಂದೇಟು ಹಾಕಿದ್ದರು. ಆದರೆ ಇದೀಗ ನೀರು ಹೆಚ್ಚಾಗೇನೋ ಸಂಗ್ರಹವಾಗಿದೆ. ಆದರೆ ಇದೀಗ ಏಕಾಏಕಿ ಯಾವುದೇ ಆದೇಶ ಇಲ್ಲದೇ ನೀರು ಬಿಡುತ್ತಿರೋದು ಆಕ್ರೋಶಕ್ಕೆ ಕಾರಣವಾಗಿದೆ. ಇನ್ನು ಮಾಜಿ ಸಚಿವ ರಾಜುಗೌಡ ಕೃಷ್ಣ ಭಾಗ್ಯ ಜಲನಿಯಮಿತ ಕಚೇರಿಗೆ ಭೇಟಿ ನೀಡಿ, ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.