ಕೋಲಾರ:- ಪತಿ ಜತೆ ಸಂಸಾರ ನಡೆಸಲು ನಿರಾಕರಿಸಿದ್ದ ಮಗಳನ್ನು ಮರ್ಯಾದೆಗೆ ಅಂಜಿ ತೋಟದಲ್ಲಿ ಕೊಂದು ತಂದೆ ಸುಟ್ಟು ಹಾಕಿರುವ ಘಟನೆ ಮುಳಬಾಗಿಲು ತಾಲ್ಲೂಕಿನ ಮುಷ್ಟೂರು ಗ್ರಾಮದಲ್ಲಿ ಜರುಗಿದೆ.
ಇದೀಗ ತಂದೆಯನ್ನು ಅರೆಸ್ಟ್ ಮಾಡಲಾಗಿದೆ. ಅರ್ಚಿತಾ (17) ಕೊಲೆಯಾದ ಯುವತಿ. ಮೇ 21ರಂದು ಗಂಡನ ಮನೆಯಿಂದ ಕರೆ ತರುವಾಗ ಆಕೆಯ ತಂದೆ ರವಿ, ತೋಟದ ಮನೆಗೆ ಕರೆದೊಯ್ದು ಬಡಿಗೆಯಿಂದ ಹೊಡೆದು ಕೊಂದಿದ್ದು, ಅಲ್ಲಿಯೇ ಸುಟ್ಟುಹಾಕಿದ್ದ.
ತಿಗಳ ಸಮುದಾಯದ ಅರ್ಚಿತಾ ತನ್ನ ಸಹೋದರ ಸಂಬಂಧಿ ಯುವಕನನ್ನೇ (ಚಿಕ್ಕಪ್ಪನ ಮಗ) ಪ್ರೀತಿಸುತ್ತಿದ್ದಳು. ಈ ವಿಚಾರ ಗೊತ್ತಾಗುತ್ತಲೇ ಪೋಷಕರು ಕೋಲಾರ ತಾಲ್ಲೂಕಿನ ವೇಮಗಲ್ ಬಳಿಯ ಜೋಡಿ ಕೃಷ್ಣಪುರ ಗ್ರಾಮದ ತಮ್ಮದೇ ಸಮುದಾಯದ ಯುವಕನೊಂದಿಗೆ ಮದುವೆ ಮಾಡಿಕೊಟ್ಟಿದ್ದರು.
‘ಪತಿ ಜತೆ ಸಂಸಾರ ನಡೆಸಲು ನಿರಾಕರಿಸಿದ ಮಗಳನ್ನು ತಂದೆಯೇ ಹೋಗಿ ಮೇ 21ರಂದು ವಾಪಸ್ ಕರೆ ತಂದಿದ್ದ. ಗ್ರಾಮಕ್ಕೆ ಬರುವಾಗ ತೋಟದ ಮನೆಗೆ ಕರೆದೊಯ್ದು ಮಗಳನ್ನು ಕೊಂದು ಹಾಕಿದ್ದ’ ಎಂದು ಪೊಲೀಸರು ತಿಳಿಸಿದ್ದಾರೆ.