ಬೆಂಗಳೂರು/ ಬೆಳಗಾವಿ :- ಸುವರ್ಣವಿಧಾನಸೌಧ ಡಿ.05: ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆ ಅನುಮತಿ ನೀಡಿದೆ. ಈ ಹುದ್ದೆಗಳಿಗೆ ಎರೆಡು ಹಂತದಲ್ಲಿ ನೇಮಕಾತಿಯ ಪ್ರಕ್ರಿಯೆ ನಡೆಯಲಿದೆ ಎಂದು ಕೃಷಿ ಸಚಿವ ಎನ್.ಚಲವರಾಯಸ್ವಾಮಿ ಹೇಳಿದರು.
ಬುಧವಾರ ವಿಧಾನಸಭಾ ಅಧಿವೇಶನದಲ್ಲಿ ಬೀಳಗಿ ಶಾಸಕ ಪಾಟೀಲ್.ಜೆ.ಟಿ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿವ ವೇಳೆ ನಡೆದ ಚರ್ಚೆಯಲ್ಲಿ, ಅವರು ಈ ಮಾಹಿತಿಯನ್ನು ಸದನಕ್ಕೆ ನೀಡಿದರು. ಕೃಷಿ ಇಲಾಖೆಯಲ್ಲಿ ಶೇ.60 ರಷ್ಟು ಹುದ್ದೆಗಳ ಕೊರತೆ ಇದೆ. ಇದರಿಂದಾಗಿ ಹೋಬಳಿ ಹಾಗೂ ಗ್ರಾಮಗಳಲ್ಲಿ ಅಧಿಕಾರಿಗಳು ತೆರಳಿ ಕ್ಷೇತ್ರ ಕಾರ್ಯನಿರ್ವಹಿಸುವಲ್ಲಿ ತೊಂದರೆಯಾಗುತ್ತಿದೆ. ಈ ಸಮಸ್ಯೆಯನ್ನು ನೇಮಕಾತಿ ಮಾಡುವ ಮೂಲಕ ಶೀಘ್ರವೇ ಬಗೆಹರಿಸಲಾಗುವುದು.
ಸರ್ಕಾರ ಕೃಷಿ, ನೀರಾವರಿ ಹಾಗೂ ರೈತರ ಜಮೀನ ರಸ್ತೆಗಳ ಬಗ್ಗೆ ಹೆಚ್ಚಿನ ಒತ್ತು ನೀಡಿದೆ. ಸದ್ಯ ಕೃಷಿ ವಿಶ್ವವಿದ್ಯಾಲಯ, ಸಂಶೋಧನಾ ಕೇಂದ್ರ ಹಾಗೂ ಇಲಾಖೆ ಅಧಿಕಾರಿಗಳು ರೈತರ ಹೊಲಗಳಿಗೆ ತೆರಳಿ ಸೂಕ್ತ ಸಲಹೆ ಸೂಚನೆಗಳನ್ನು ನೀಡುತ್ತಿದ್ದಾರೆ. ಅತಿಯಾದ ರಸಗೊಬ್ಬರಗಳ ಬಳಕೆಯಿಂದ ಕೃಷಿ ಭೂಮಿಯ ಫಲವತ್ತತೆ ಕಡಿಮೆಯಾಗುತ್ತಿದೆ. ಇದನ್ನು ತಡೆಗಟ್ಟಲು ರೈತರಿಗೆ ಭೂ ಫಲವತ್ತೆ ಕುರಿತು ಜಿಲ್ಲಾ ಕೃಷಿ ತರಬೇತಿ ಕೇಂದ್ರಗಳಲ್ಲಿ ತರಬೇತಿ ನೀಡಲಾಗುತ್ತಿದೆ. ಮಣ್ಣು ಪರೀಕ್ಷೆಯ ಮೂಲಕ ಸಮತೋಲನ ಪ್ರಮಾಣ ರಸಗೊಬ್ಬರಗಳ ಬಳಕೆಗೆ ಶಿಫಾರಸ್ಸು ಮಾಡಲಾಗುತ್ತಿದೆ. ಸಾವಯವ, ಜೈವಿಕ,ನ್ಯಾನೋ ಹಾಗೂ ನೈಸರ್ಗಿಕ ಗೊಬ್ಬರ, ಲಘುಫೋಷಕಾಂಶಗಳು ಮತ್ತು ಮಣ್ಣು ಸುಧಾರಕಗಳ ಬಳಕೆ ಬಗ್ಗೆ ರೈತರಿಗೆ ವೈಜ್ಞಾನಿಕವಾಗಿ ಸಲಹೆ ನೀಡಲಾಗುತ್ತಿದೆ. ಮಣ್ಣಿನ ಸಾವಯವ ಇಂಗಾಲ ಹೆಚ್ಚಿಸುವ ಅಭಿಯಾನದಡಿ ಹಸಿರೆಲೆ ಗೊಬ್ಬರದ ಬೀಜಗಳನ್ನು ಶೇ.75ರ ಸಹಾಯಧನಲ್ಲಿ ರೈತÀ ಸಂಪರ್ಕ ಕೇಂದ್ರಗಳ ಮೂಲಕ ವಿತರಣೆ ಮಾಡಲಾಗುತ್ತಿದೆ. ಇದಕ್ಕಾಗಿ ಪ್ರಸಕ್ತ ಸಾಲಿನಲ್ಲಿ ರೂ.3 ಕೋಟಿ ಒದಗಿಸಲಾಗಿದೆ ಎಂದರು.
ಆಹಾರ ಮತ್ತು ಪೌಷ್ಠಿಕಾಂಶಭದ್ರತೆ ಕಾರ್ಯಕ್ರಮದಡಿ ಬೀಜಗಳು, ಜಿಪ್ಸಂ, ಕೃಷಿ ಸುಣ್ಣ, ಲಘು ಪೋಷಕಾಂಶಗಳು, ಹಸಿರಲೆ, ಜೈವಿಕ ಹಾಗೂ ಸಾವಯವ ಗೊಬ್ಬರಗಳನ್ನು ಶೇ.50ರ ಸಹಾಯಧನದಲ್ಲಿ ವಿತರಿಸಲಾಗುತ್ತಿದೆ. ಸದರಿ ಯೋಜನೆಯಡಿ ರೂ.30 ಕೋಟಿ ವೆಚ್ಚದಲ್ಲಿ 7,43,850 ಹೆಕ್ಟೇರ್ ಪ್ರದೇಶಕ್ಕೆ ಪರಿಕರಗಳನ್ನು ಒದಗಿಸಲಾಗಿದೆ ಎಂದು ಕೃಷಿ ಸಚಿವ ಎನ್.ಚಲವರಾಯಸ್ವಾಮಿ ಸ್ಪಷ್ಟಪಡಿಸಿದರು.