ವಾಷಿಂಗ್ಟನ್: ಎರಡು ದಿನಗಳ ಕಾಲ ಅಮೆರಿಕಾ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ನೂತನ ಅಧ್ಯಕ್ಷ ಟ್ರಂಪ್ ಜೊತೆ ಹಲವು ಮಹತ್ವದ ಚರ್ಚೆಗಳನ್ನು ನಡೆಸಿದ್ದಾರೆ. ಮೋದಿ ಅಮೆರಿಕಾ ಭೇಟಿ ಭಾರತ-ಅಮೆರಿಕ ಸಂಬಂಧಗಳಲ್ಲಿ ನಿರ್ಣಾಯಕ ಕ್ಷಣವಾಗಿದ್ದು, ವಾಷಿಂಗ್ಟನ್ನಲ್ಲಿ ಪ್ರಮುಖ ಸಭೆಗಳನ್ನು ಆಯೋಜಿಸಲಾಗಿದೆ. ಇದರಲ್ಲಿ ಟೆಸ್ಲಾ ಸಿಇಒ ಎಲೋನ್ ಮಸ್ಕ್ ಹಾಗೂ ಸುಂಕ ವಿಧಿಸುವ ಕುರಿತು ಟ್ರಂಪ್ ಅವರೊಂದಿಗಿನ ಚರ್ಚೆ ಪ್ರಮುಖವಾಗಿದೆ.
ಪ್ರಧಾನಿ ಮೋದಿ ಅವರನ್ನು ಭೇಟಿಯಾಗುವುದಕ್ಕೂ ಮುನ್ನವೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪರಸ್ಪರ ಸುಂಕ ಪರಿಚಯಿಸಲು ಯೋಜಿಸಿದ್ದಾರೆ.
ಇಂದು ಮಧ್ಯಾಹ್ನ 1:30ರ ವೇಳೆಗೆ (ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 11:30ಕ್ಕೆ) ಸುಂಕ ಕ್ರಮಗಳನ್ನು ಪರಿಚಯಿಸಲು ನಿರ್ಧರಿಸಿರುವುದಾಗಿ ಟ್ರಂಪ್ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆದ್ರೆ ಯಾವುದೇ ವಿವರಗಳನ್ನು ಬಹಿರಂಗಪಡಿಸಿಲ್ಲ. ಹೀಗಾಗಿ ಕೊನೇ ಕ್ಷಣದಲ್ಲಿ ಮೋದಿ-ಟ್ರಂಪ್ ಭೇಟಿ ಕೊನೇ ಕ್ಷಣದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಅಮೆರಿಕದ 47ನೇ ಅಧ್ಯಕ್ಷರಾಗಿ ಜ.20 ರಂದು ಅಧಿಕಾರ ಸ್ವೀಕರಿಸಿದ ಟ್ರಂಪ್ ನೀರಿಕ್ಷೆಯಂತೆ ಕೆನಡಾ, ಮೆಕ್ಸಿಕೊ ಹಾಗೂ ಚೀನಾ ದೇಶಗಳ ಮೇಲೆ ತೆರಿಗೆ ವಿಧಿಸುವ ಆದೇಶಕ್ಕೆ ಟ್ರಂಪ್ ಸಹಿ ಹಾಕಿದ್ದರು. ಕೆನಡಾ ಹಾಗೂ ಮೇಕ್ಸಿಕೊ ದೇಶಗಳಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ತಲಾ ಶೇ.25ರಷ್ಟು ಮತ್ತು ಚೀನಾದ ವಸ್ತುಗಳ ಮೇಲೆ ಶೇ.10ರಷ್ಟು ಸುಂಕವನ್ನು ಹೆಚ್ಚಿಸಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶನಿವಾರ ಆದೇಶ ಹೊರಡಿಸಿದ್ದರು. ಆದ್ರೆ ದಿಢೀರ್ ಈ ನಿರ್ಧಾರದಲ್ಲಿ ಟ್ರಂಪ್ ಕೆನಡಾ ಮತ್ತು ಮೆಕ್ಸಿಕೋ ದೇಶಗಳಿಗೆ ವಿಧಿಸಿದ್ದ ಸುಂಕವನ್ನು ತಾತ್ಕಾಲಿಕವಾಗಿ ತಡೆ ಹಿಡಿದಿದ್ದಾರೆ.
ಟ್ರಂಪ್ 2ನೇ ಬಾರಿಗೆ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿ ಅಮೆರಿಕಾಗೆ ಭೇಟಿ ನೀಡಿರುವ ಪ್ರಧಾನಿ ಮೋದಿ ಇಂದು ಸುಂಕ ವಿಧಿಸುವ ಕುರಿತು ಡೊನಾಲ್ಡ್ ಟ್ರಂಪ್ ಅವರೊಂದಿಗೆ ಮಾತುಕತೆ ನಡೆಸಿರುವ ಸಾಧ್ಯತೆ ಇದೆ.