ನವದೆಹಲಿ: ಭಾರತ ಕ್ರಿಕೆಟ್ ತಂಡವನ್ನು ವಿರಾಟ್ ಕೊಹ್ಲಿಯಂತೆ ಯಶಸ್ವಿಯಾಗಿ ಮುನ್ನಡೆಸಿದ ಯಾವ ನಾಯಕರೂ ಇಲ್ಲ.. ಇಂತಹ ಪರಿಸ್ಥಿತಿಯಲ್ಲಿ ನಾಯಕತ್ವ ವಿಚಾರವನ್ನು ಬಿಸಿಸಿಐ ಇನ್ನೂ ಉತ್ತಮವಾಗಿ ಬಗೆಹರಿಸಬಹುದಿತ್ತು ಎಂದು ಮಾಜಿ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ. ಕೆ.ಎಲ್.ರಾಹುಲ್ ಹಾಗೂ ಶ್ರೇಯಸ್ ಅಯ್ಯರ್ ಟೀಂ ಇಂಡಿಯಾದ ಭವಿಷ್ಯದ ನಾಯಕರು ಎಂದು ತಂಡದ ಮಾಜಿ ಕೋಚ್ ರವಿಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.
ಈ ಬಗ್ಗೆ ರಾಷ್ಟ್ರೀಯ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು, ‘ರಾಹುಲ್ ಹಾಗೂ ಶ್ರೇಯಸ್ ಅಯ್ಯರ್ ಉತ್ತಮ ನಾಯಕತ್ವದ ಗುಣ ಹೊಂದಿದ್ದಾರೆ. ಭವಿಷ್ಯದಲ್ಲಿ ಅವರು ಟೀಂ ಇಂಡಿಯಾವನ್ನು ಮುನ್ನಡೆಸುವ ಎಲ್ಲಾ ಸಾಧ್ಯತೆಗಳಿವೆ’ ಎಂದಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ದದ ಟೆಸ್ಟ್ ಸರಣಿಗೆ ತಂಡವನ್ನು ಆಯ್ಕೆಮಾಡುವ ಫಾರ್ಮ್ ಸಮಸ್ಯೆ ಎದುರಿಸುತ್ತಿರುವ ಅಜಿಂಕ್ಯ ರಹಾನೆ ಅವರನ್ನು ಕೆಳಗಿಳಿಸಿ, ರೋಹಿತ್ ಶರ್ಮಾಗೆ ಉಪನಾಯಕ ಪಟ್ಟ ಕಟ್ಟಲಾಗಿತ್ತು.

ಆದರೆ ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಮುನ್ನ ರೋಹಿತ್ ಶರ್ಮಾ ಗಾಯಗೊಂಡಿದ್ದರಿಂದ, ಟೆಸ್ಟ್ ಸರಣಿಗೆ ಕೆ.ಎಲ್. ರಾಹುಲ್‌ಗೆ ಉಪನಾಯಕ ಪಟ್ಟ ಕಟ್ಟಲಾಗಿದೆ. ಕೆ.ಎಲ್. ರಾಹುಲ್ ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಭಾರತದ ಟೆಸ್ಟ್ ತಂಡದ ಉಪನಾಯಕರಾಗಿ ಕಾರ‍್ಯನಿರ್ವಹಿಸಲಿದ್ದಾರೆ. ಅವರು ಐಪಿಎಲ್‌ನ ಕಳೆದೆರಡು ಆವೃತ್ತಿಗಳಲ್ಲಿ ಪಂಜಾಬ್ ಕಿಂಗ್ಸ್ ತಂಡಕ್ಕೆ ನಾಯಕತ್ವ ವಹಿಸಿದ್ದರು. ಇನ್ನು, ಶ್ರೇಯಸ್ ಅಯ್ಯರ್ 2018ರಿಂದ 2020ರ ವರೆಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಿದ್ದರು.