ಆಗ್ರಾ: ದೆಹಲಿಯಲ್ಲಿ ನಿರ್ಭಯಾ ರೀತಿಯದ್ದೆ ಮತ್ತೊಂದು ಪ್ರಕರಣ ಮಾರ್ದನಿಸುತ್ತಿದೆ. ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದ ಸಂತ್ರಸ್ತೆ ಸಾವು-ಬದುಕಿನ ನಡುವೆ ಹೋರಾಟ ಮಾಡಿ ಕೊನೆ ಉಸಿರು ಎಳೆದಿದ್ದಾರೆ.ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ ನಾಲ್ವರಿಂದ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದ ಮಹಿಳೆ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಮಹಿಳೆಯ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಂಡುಬರದಿದ್ದಾಗ ಆಕೆಯನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ನಾಲ್ವರು ಆರೋಪಿಗಳಿಂದ ಸಾಮೂಹಿಕ ಅತ್ಯಾಚಾರಕ್ಕೀಡಾಗಿದ್ದ ಮಹಿಳೆಯ ಪರಿಸ್ಥಿತಿ ಚಿಂತಾಜನಕವಾಗಿತ್ತು. ಗಂಭೀರ ಗಾಯಗಳಾಗಿದ್ದು ನಾಲಿಗೆ ಕತ್ತರಿಸಿ ಹಾಕಲಾಗಿತ್ತು ಎಂದು ವೈದ್ಯರು ದಾರುಣ ಸ್ಥಿತಿಯನ್ನು ತೆರೆದಿಟ್ಟಿದ್ದಾರೆ. ನನ್ನ ಸಹೋದರಿ ಕ್ರೂರತ್ವಕ್ಕೆ ಬಲಿಯಾಗಿದ್ದಾಳೆ. ಆರೋಪಿಗಳನ್ನು ಗಲ್ಲಿಗೆ ಹಾಕಬೇಕು ಎಂದು ಸಂತ್ರಸ್ತೆಯ ಅಣ್ಣ ಒತ್ತಾಯಿಸಿದ್ದಾರೆ.ದೆಹಲಿಯಿಂದ 200 ಕಿಲೋ ಮೀಟರ್ ದೂರದಲ್ಲಿ ಹತ್ರಾಸ್ ಎಂಬ ಗ್ರಾಮದಲ್ಲಿ ದಲಿತ ಮಹಿಳೆ ಮೇಲೆ ಅತ್ಯಾಚಾರ ನಡೆದಿತ್ತು.

ಗದ್ದೆಯೊಂದರಲ್ಲಿ ಮಹಿಳೆ ತನ್ನ ಕುಟುಂಬದವರ ಜೊತೆ ಹುಲ್ಲು ಕೀಳುತ್ತಿದ್ದ ವೇಳೆ ಆಕೆಯ ದುಪ್ಪಟ್ಟಾ ಹಿಡಿದು ಎಳೆದುಕೊಂಡು ಹೋಗಿದ್ದ ಬಹುಸಂಖ್ಯಾತ ಸಮುದಾಯದ ನಾಲ್ವರು ಆಕೆ ಮೇಲೆ ಅತ್ಯಾಚಾರ ಎಸಗಿದ್ದರು. ಆರೋಪಿಗಳಾದ ಸಂದೀಪ್, ರಾಮು, ಲವ್‌ಕುಶ್ ಮತ್ತು ರವಿ ಎಂಬುವರನ್ನು ಈಗಾಗಲೇ ಬಂಧಿಸಲಾಗಿದೆ. ಸಂತ್ರಸ್ತೆಯ ಕುಟುಂಬಕ್ಕೆ 4.12 ಲಕ್ಷ ರೂ. ಪರಿಹಾರ ಘೋಷಣೆ ಮಾಡಲಾಗಿದೆ.
