ಕೋಲಾರ: ಶ್ರೀರಾಮನ ಕಟೌಟ್ ಹಾಗೂ ಪ್ಲೆಕ್ಸ್ ಅನ್ನು ದುಷ್ಕರ್ಮಿಗಳು ಬ್ಲೇಡ್ನಿಂದ ಹರಿದಿರುವ ಘಟನೆ ಮುಳಬಾಗಿಲು ನಗರದ ಗುಣಗಂಟೆಪಾಳ್ಯದಲ್ಲಿ ನಡೆದಿದೆ. ಜನವರಿ 22 ರಂದು ಅಯೋಧ್ಯೆ ರಾಮಮಂದಿರದಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ನಡೆಯುತ್ತದೆ. ಈ ಹಿನ್ನೆಲೆಯಲ್ಲಿ ಲವಕುಶ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮತ್ತು ಪುತ್ರ ಅಯೋಧ್ಯೆ ಧ್ರುವ ಚಾರಿಟಬಲ್ ಟ್ರಸ್ಟ್ ವತಿಯಿಂದ ನಗರದಲ್ಲಿ ರಾಮನ ಶೋಭಾಯಾತ್ರೆ,
ಸೀತರಾಮ ಕಲ್ಯಾಣೋತ್ಸವ ಮತ್ತು ಮಹಾಸಾಮ್ರಾಜ್ಯ ಪಟ್ಟಾಭಿಷೇಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ದಿನಾಂಕ 21 ಮತ್ತು 22 ರಂದು ಎರಡು ದಿನ ಈ ಕಾರ್ಯಕ್ರಮಗಳು ನಡೆಯಲಿದ್ದವು ಹೀಗಾಗಿ ನಗರದಲ್ಲಿ ಬ್ಯಾನರ್ ಮತ್ತು ಶ್ರೀರಾಮ ಕಟೌಟ್ ನಿಲ್ಲಿಸಲಾಗಿತ್ತು. ಈ ಬ್ಯಾನರ್ ಮತ್ತು ಕಟ್ಔಟ್ಗಳನ್ನು ನಿನ್ನೆ (ಜ.16)ರ ರಾತ್ರಿ 10.44ರ ಸುಮಾರಿಗೆ ಯಾರೋ ದುಷ್ಕರ್ಮಿಗಳು ಬ್ಲೇಡ್ನಿಂದ ಹರಿದು ಹಾಕಿದ್ದಾರೆ.
ಶ್ರೀರಾಮನ ಕಟೌಟ್ನ್ನು ಹರಿದ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಸ್ಥಳಕ್ಕೆ ಮುಳಬಾಗಿಲು ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಪ್ರಕರಣ ಸಂಬಂಧ ಮುಳಬಾಗಿಲು ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಕಿಡಿಗೇಡಿಗಳು ಫ್ಲೆಕ್ಸ್ ಹರಿದು ಹಾಕುತ್ತಿರುವ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆಯಾಗಿತ್ತು. ಇದನ್ನು ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರ ಬಲೆಗೆ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.