ಮಂಜುನಾಥ್ ವಿಶ್ವಕರ್ಮ ಹಾಗೂ ಕಿರಣ್ ಭರ್ತೂರ್ ನಿರ್ಮಾಣದ, ದೀಪಕ್ ಮಧುವನಹಳ್ಳಿ ನಿರ್ದೇಶನದ ಹಾಗೂ “ಫಸ್ಟ್ ರ್ಯಾಂಕ್ ರಾಜು” ಖ್ಯಾತಿಯ ಗುರುನಂದನ್ ನಾಯಕರಾಗಿ ನಟಿಸಿರುವ “ರಾಜು ಜೇಮ್ಸ್ ಬಾಂಡ್ ” ಚಿತ್ರ ಫೆಬ್ರವರಿ 14 ರಂದು ಕರ್ನಾಟಕದಾದ್ಯಂತ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇತ್ತೀಚಿಗೆ ಯು.ಕೆ ಹಾಗೂ ಯು.ಎಸ್ ನಲ್ಲೂ ಈ ಚಿತ್ರ ಬಿಡುಗಡೆಯಾಗಿದೆ. ಅಲ್ಲಿನ ಜನರು ಸಹ ಈ ಚಿತ್ರದ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ಈ ಕುರಿತು ಸಕ್ಸಸ್ ಮೀಟ್ ನಲ್ಲಿ ಚಿತ್ರತಂಡದ ಸದಸ್ಯರು ಹೆಚ್ಚಿನ ವಿವರಣೆ ನೀಡಿದರು.
“ರಾಜು ಜೇಮ್ಸ್ ಬಾಂಡ್” ಚಿತ್ರವನ್ನು ಮೆಚ್ಚಿಕೊಂಡ ಇಲ್ಲಿನ ಹಾಗೂ ವಿದೇಶದಲ್ಲಿರುವ ಎಲ್ಲಾ ಕನ್ನಡ ಕಲಾಭಿಮಾನಿಗಳಿಗೆ ಧನ್ಯವಾದ ಎಂದು ಮಾತನಾಡಿದ ನಿರ್ದೇಶಕ ದೀಪಕ್ ಮಧುವನಹಳ್ಳಿ, ಇದು ನನ್ನೊಬ್ಬನ ಗೆಲುವಲ್ಲ. ನಮ್ಮ ತಂಡದ ಗೆಲುವು. ಚಿತ್ರವನ್ನು ಅಂದುಕೊಂಡ ಹಾಗೆ ತರಲು ಸಹಕಾರ ನೀಡಿದ ನಿರ್ಮಾಪಕರಿಗೆ, ಪಾತ್ರಗಳಿಗೆ ಜೀವ ತುಂಬಿದ ಕಲಾವಿದರಿಗೆ , ಉತ್ತಮವಾಗಿ ಕಾರ್ಯ ನಿರ್ವಹಿಸಿದ ತಂತ್ರಜ್ಞರಿಗೆ ಹಾಗೂ ವಿತರಕ ಸತ್ಯಪ್ರಕಾಶ್ ಅವರಿಗೆ ಧನ್ಯವಾದ ಎಂದರು.
ಇದು ನಾವು ದುಡ್ಡಿಗಿಂತ, ಆಸೆಪಟ್ಟು ಮಾಡಿದ ಸಿನಿಮಾ. ಚಿತ್ರವನ್ನು ನೋಡಿದ ಪ್ರೇಕ್ಷಕರು, ಚೆನ್ನಾಗಿದೆ ಅಂತ ಹೇಳುತ್ತಿರುವುದು ಬಹಳ ಖುಷಿಯಾಗಿದೆ. ನಮ್ಮ ಚಿತ್ರಕ್ಕೆ ವಿತರಕ ಸತ್ಯಪ್ರಕಾಶ್ ಅವರು ಎಲ್ಲಾ ಕಡೆ ಒಳ್ಳೆಯ ಚಿತ್ರಮಂದಿರಗಳನ್ನು ಕೊಡಿಸಿದ್ದರು. ಬೆಂಗಳೂರಿನಲ್ಲೂ ನಮ್ಮ ಚಿತ್ರ ಚೆನ್ನಾಗಿ ಪ್ರದರ್ಶನವಾಗುತ್ತಿದೆ. ಅದಕ್ಕಿಂತ ಉತ್ತರ ಕರ್ನಾಟಕ ಹಾಗೂ ತುಮಕೂರು ಭಾಗದಲ್ಲಿ ಇನ್ನೂ ಹೆಚ್ಚು ಯಶಸ್ವಿಯಾಗಿದೆ. ಇತ್ತೀಚಿಗೆ ಯು.ಕೆ , ಯು.ಎಸ್ ನಲ್ಲೂ ನಮ್ಮ ಚಿತ್ರ ಬಿಡುಗಡೆಯಾಗಿದೆ. ಈಗ ಅಲ್ಲಿ ಭಯಂಕರ ಚಳಿ. ಜನ ಆಚೆ ಬರುವುದೇ ಇಲ್ಲ. ಅಂತಹುದರಲ್ಲೂ ನಮ್ಮ ಚಿತ್ರವನ್ನು ಅಲ್ಲಿನ ಜನರು ಹೌಸ್ ಫುಲ್ ಮಾಡಿದ್ದಾರೆ. ಅಭಿಮಾನಿಗಳಿಗೆ, ಚಿತ್ರತಂಡದ ಸದಸ್ಯರಿಗೆ ಹಾಗೂ ಮಾಧ್ಯಮ ಮಿತ್ರರಿಗೆ ಧನ್ಯವಾದ. ನಮ್ಮ ಚಿತ್ರದ ಪ್ರೀ ರಿಲೀಸ್ ಇವೆಂಟ್ ಗೆ ಆಗಮಿಸಿ ಹಾರೈಸಿದ ಗೃಹ ಮಂತ್ರಿಗಳಾದ ಶ್ರೀ ಪರಮೇಶ್ವರ್ ಹಾಗೂ ನಟಿ ರಮ್ಯ ಅವರಿಗೆ. ಚಿತ್ರ ಬಿಡುಗಡೆ ಆದ ಮೇಲೆ ಶೋ ರೀಲ್ ವೀಕ್ಷಿಸಿ ಪ್ರೋತ್ಸಾಹಿಸಿದ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ.ಶಿವಕುಮಾರ್ ಅವರಿಗೆ ತುಂಬು ಹೃದಯದ ವಿಶೇಷ ಧನ್ಯವಾದ ಎಂದರು ನಿರ್ಮಾಪಕರಾದ ಕಿರಣ್ ಭರ್ತೂರ್ ಹಾಗೂ ಮಂಜುನಾಥ್ ವಿಶ್ವಕರ್ಮ.
ನಾನು ಹೋದ ಕಡೆ ಎಲ್ಲ ಬಾಂಡ್ ಅಂತಲೇ ಗುರುತ್ತಿಸುತ್ತಿರುವುದು ಖುಷಿಯಾಗಿದೆ. ಒಳ್ಳೆಯ ಚಿತ್ರ ನೀಡಿದ ನಿರ್ಮಾಪಕರಿಗೆ, ನಿರ್ದೇಶಕರಿಗೆ ಹಾಗೂ ತಂಡಕ್ಕೆ ನಾಯಕ ಗುರುನಂದನ್ ಧನ್ಯವಾದ ತಿಳಿಸಿದರು.
ಚಿತ್ರಕ್ಕೆ ಹಾಗೂ ನನ್ನ ಪಾತ್ರಕ್ಕೆ ಸಿಗುತ್ತಿರುವ ಪ್ರಶಂಸೆಗೆ ತುಂಬಾ ಸಂತೋಷವಾಗಿದೆ ಎಂದರು ನಾಯಕಿ ಮೃದುಲ. ವಿತರಕ ಸತ್ಯಪ್ರಕಾಶ್ ಸಹ ಚಿತ್ರದ ಯಶಸ್ಸಿನ ಖುಷಿಯನ್ನು ಮಾತಿನ ಮೂಲಕ ಹಂಚಿಕೊಂಡರು.